ಬೆಳಗಾವಿ: ಅಕ್ರಮವಾಗಿ ಸ್ಮಗ್ಲಿಂಗ್ ಮಾಡುತ್ತಿದ್ದ ಚಿನ್ನದ ಮೇಲೆ ಕನ್ನ ಹಾಕಿದ್ದ ಪೊಲೀಸ್ ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ಇಂದು ತೀವ್ರ ವಿಚಾರಣೆ ನಡೆಸಿದರು.
ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಬಿಡು ಬಿಟ್ಟಿದ್ದ ಸಿಐಡಿ ಅಧಿಕಾರಿಗಳು ಯಮಕನಮರಡಿ ಪಿಎಸ್ಐ ರಮೇಶ್ ಪಾಟೀಲ್ ಅವರನ್ನು ತೀವ್ರ ವಿಚಾರಣೆ ನಡೆಸಿದರು.
ಗೋಕಾಕ ಡಿವೈಎಸ್ಪಿ, ಹುಕ್ಕೇರಿ ಸಿಪಿಐ ಹಾಗೂ ಯಮಕನಮರಡಿ ಠಾಣೆಯ ಪಿಎಸ್ಐ ಸ್ಮಗ್ಲಿಂಗ್ ಮಾಡುತ್ತಿದ್ದ ಚಿನ್ನದ ಮೇಲೆ ಕನ್ನ ಹಾಕಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಮೂವರು ಅಧಿಕಾರಿಗಳನ್ನು ರಾತ್ರಿಯೇ ಎತ್ತಂಗಡಿ ಮಾಡಲಾಗಿತ್ತು. ಆದರಿಂದು ಪಿಎಸ್ಐ ರಮೇಶ ಪಾಟೀಲ್ ಅವರನ್ನು ಸಿಐಡಿ ತಂಡ ತೀವ್ರ ವಿಚಾರಣೆ ನಡೆಸಿತು.
ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ತಂಗಿದ್ದ ಐವರು ಅಧಿಕಾರಿಗಳು ವಿಚಾರಣೆ ನಂತರ ಬೆಂಗಳೂರಿಗೆ ಹೊರಟರು. ನಿನ್ನೆ ಯಮಕನಮರಡಿ ಪೊಲೀಸ್ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದರು. ಅಲ್ಲದೇ ಗೋಲ್ಡ್ ಮಾಲೀಕನ ಕರೆ ತಂದು ಸಿಐಡಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದರು.
ನಾಲ್ಕು ದಿನಗಳ ನಂತರ ಸಿಐಡಿ ತಂಡ ಮತ್ತೇ ಬೆಳಗಾವಿಗೆ ಆಗಮಿಸುವ ಸಾಧ್ಯತೆ ಇದೆ. ಯಮಕನಮರಡಿ ಪೊಲೀಸ್ ಠಾಣೆ ಸಿಬ್ಬಂದಿ ಸೀಜ್ ಮಾಡಿದ್ದ ಕಾರಿನಲ್ಲಿ 4ಕೆಜಿ 900ಗ್ರಾಂ ಚಿನ್ನ ಇತ್ತು. ಈ ಚಿನ್ನದ ಮೇಲೆ ಪೊಲೀಸರು ಕನ್ನ ಹಾಕಿದ್ದರು. ಇದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದ ಎಂಬ ಆರೋಪವೂ ಇತ್ತು. ಹೀಗಾಗಿ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.