ಬೆಳಗಾವಿ: ನಗರದ ಅನಿಗೋಳದ ಕನಕದಾಸ ಕಾಲೋನಿಯಲ್ಲಿ ಮರುಸ್ಥಾಪನೆ ಆಗಿರುವ ರಾಯಣ್ಣನ ಪುತ್ಥಳಿ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೆಲ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣನ ಮೂರ್ತಿ ವಿರೂಪ ಮಾಡಿದ್ದನ್ನು ಪೊಲೀಸರು ಸರಿ ಮಾಡಿದ್ದಾರೆ. ರಾಯಣ್ಣನ ಪುತ್ಥಳಿ ವಿರೂಪಗೊಳಿಸಿದ್ದು ಅತ್ಯಂತ ಖಂಡನೀಯ ಘಟನೆ.
ರಾಯಣ್ಣ ಯಾವುದೋ ಒಂದು ಜಾತಿಗೆ ಸೀಮಿತವಾಗಿಲ್ಲ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿ, ದೇಶಭಕ್ತ. ಅಂತವರ ಪುತ್ಥಳಿಯನ್ನು ವಿರೂಪ ಮಾಡುವಂತಹವರು ಕಿಡಿಗೇಡಿಗಳಿಗೆ ಶಿಕ್ಷೆ ಆಗಬೇಕು. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ.. ಎಂಇಎಸ್ ಬ್ಯಾನ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಂಇಎಸ್ ಬ್ಯಾನ್ ಮಾಡಬೇಕೆಂಬುದು ಜನರ ಒತ್ತಾಯವಿದೆ. ಇಲ್ಲಿನ ಜನ ರಾಯಣ್ಣನ ಪ್ರತಿಮೆಯನ್ನು ಕೆರೆಯ ದಂಡೆಯ ಮೇಲೆ ದೊಡ್ಡದಾಗಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ.
ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಮೂಲ ಉದ್ದೇಶ. ಎಂಇಎಸ್ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಆಯುಧಗಳನ್ನು ಹಿಡಿದುಕೊಂಡು ಈ ರೀತಿ ಮಾಡ್ತಿದ್ದಾರೆ ಅಂದರೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತಾನೆ ಅರ್ಥ. ಪೊಲೀಸ್ ಬಗ್ಗೆ ಭಯವಿಲ್ಲ, ಬಿಜೆಪಿ ಸರ್ಕಾರದಲ್ಲಿ ಗುಪ್ತಚರ ಇಲಾಖೆ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.