ಕರ್ನಾಟಕ

karnataka

ETV Bharat / city

ದೇಶದ ಮೊದಲ ಕಿಸಾನ್ ರೈಲಿಗೆ ಚಾಲನೆ, ರಾಜ್ಯ ಪ್ರಸ್ತಾವ ಸಲ್ಲಿಸಿದರೆ ಪರಿಶೀಲನೆ: ಸುರೇಶ್​ ಅಂಗಡಿ - inauguration to the country's first Kisan train

ಪ್ರಧಾನಿ ಮೋದಿ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಇಂತಹ‌ ಕಿಸಾನ್ ರೈಲುಗಳು ಪ್ರಮುಖ ಪಾತ್ರವಹಿಸಲಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.

innaguration to the country's first Kisan train
ವರ್ಚುವಲ್ ವೇದಿಕೆ

By

Published : Aug 10, 2020, 2:50 PM IST

ಬೆಳಗಾವಿ: ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಸಂಚರಿಸಲಿರುವ ಮೊದಲ ಕಿಸಾನ್ ರೈಲಿಗೆ ವರ್ಚುವಲ್ ವೇದಿಕೆಯ ಮೂಲಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನವದೆಹಲಿಯಿಂದ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವ ತೋಮರ್ ಅವರು, ಕಿಸಾನ್ ರೈಲು ಕೃಷಿ ಕ್ಷೇತ್ರದ ಪ್ರಗತಿಗೆ ಮತ್ತು ಬೆಳೆಗೆ ನ್ಯಾಯಯುತ ದರ ಒದಗಿಸಲು ಸಹಕಾರಿಯಾಗಲಿದೆ. ಪ್ರಧಾನಮಂತ್ರಿಗಳ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಇಂತಹ‌ ಕಿಸಾನ್ ರೈಲುಗಳು ಪ್ರಮುಖ ಪಾತ್ರವಹಿಸಲಿವೆ. ಸೂಕ್ತ ಸಾಗಣೆ ಸೌಲಭ್ಯವಿದ್ದರೆ ದರ‌ ಕುಸಿತ ತಡೆಯಲು ಸಾಧ್ಯ. ಆದ್ದರಿಂದ ಇಂತಹ ಮಾರ್ಗದ ಅಗತ್ಯವಿದೆ. ಪ್ರಧಾನಿಗೆ ದೇಶದ ಕೃಷಿಕರ ಪರವಾಗಿ ಅಭಿನಂದನೆ‌ ಸಲ್ಲಿಸಿದರು.

ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ಮೊದಲ ಕಿಸಾನ್ ರೈಲು ಪೈಲಟ್ ಯೋಜನೆಯಾಗಿದೆ. ದೇಶದ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಮುಂದಾಗಿದೆ. ದೇಶದ ಪ್ರಗತಿಯ ಇಂಜಿನ್ ರೈಲ್ವೆ ಇಲಾಖೆ ಆಗಬೇಕು ಎಂದರು.

ದೇಶದ ಮೂಲೆ‌ಮೂಲೆಗಳಿಗೆ ಕೃಷಿ ಉತ್ಪನ್ನಗಳ ಸುಗಮ ಸಾಗಾಣಿಕೆಗೆ ಅನುಕೂಲ ಕಲ್ಪಿಸಲು ಸಾಧ್ಯವಾಗಲಿದೆ. ಇದರಿಂದ ದೇಶದ ರೈತ ಸಮುದಾಯ ಸ್ವಾವಲಂಬಿಯಾಗುವುದರ ಜೊತೆಗೆ ದೇಶದ ಪ್ರಗತಿಗೆ ಸಹಕಾರಿಯಾಗಲಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಿಸಾನ್ ರೈಲು ಮೂಲಕ ಕೃಷಿ ಉತ್ಪನ್ನಗಳು ಎಲ್ಲೆಡೆ ತಲುಪಿಸುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ

ರಾಜ್ಯ ಪ್ರಸ್ತಾವ ಸಲ್ಲಿಸಿದರೆ ಪರಿಶೀಲನೆ:

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದರೆ ಇಲ್ಲಿಂದಲೂ ಕಿಸಾನ್ ರೈಲು ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು. ಪ್ರಧಾನಮಂತ್ರಿಗಳು ನೀಡಿದ ಭರವಸೆಯಂತೆ ದೇವಲಾಲಿ - ದಾನಾಪುರ ನಡುವೆ ಕಿಸಾನ್ ರೈಲು ಆರಂಭಿಸಲಾಗಿದೆ ಎಂದರು.

ABOUT THE AUTHOR

...view details