ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ನೀಡಲಾಗುವ ಲ್ಯಾಪ್‌ಟಾಪ್ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಆರ್ಟಿಐ ಕಾರ್ಯಕರ್ತ ಹಾಗೂ ವಕೀಲ ಸುರೇಂದ್ರ ಉಗಾರೆ ಆಗ್ರಹಿಸಿದ್ದಾರೆ.
ರಾಣಿ ಚೆನ್ನಮ್ಮ ವಿವಿ ಲ್ಯಾಪ್‌ಟಾಪ್ ಖರೀದಿಯಲ್ಲಿ ಅವ್ಯವಹಾರ: ಆರ್ಟಿಐ ಕಾರ್ಯಕರ್ತ ಆರೋಪ - undefined
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುವ ಲ್ಯಾಪ್‌ಟಾಪ್ ಖರೀದಿಯಲ್ಲಿ ಭಾರಿ ಅವ್ಯವಹಾರ- ಆರ್ಟಿಐ ಕಾರ್ಯಕರ್ತ ಸುರೇಂದ್ರ ಉಗಾರೆ ಆರೋಪ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಂದ್ರ ಉಗಾರೆ, ಕಳೆದ ಎರಡು ವರ್ಷಗಳಿಂದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮೂರು ಬಾರಿ ಟೆಂಡರ್ ಕರೆಯಲಾಗಿದ್ದು, ಸುಮಾರು ಎರಡೂವರೆ ಕೋಟಿ ಮೊತ್ತದ ವ್ಯವಹಾರ ಮಾಡಲಾಗಿದೆ. ಅದರಲ್ಲಿ ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುವ ಲ್ಯಾಪ್‌ಟಾಪ್ ಖರೀದಿಯಲ್ಲಿ ಹೆಚ್ಚಿನ ಹಣ ತೋರಿಸಲಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ಪಾರದರ್ಶಕತೆ ಅಧಿನಿಯಮ 1999, ಕಲಂ 13ರ ಅನುಸಾರ ಟೆಂಡರ್ ಅಂಗೀಕರಿಸಿದ ಬಗ್ಗೆ ಆದೇಶ ಹೊರಡಿಸುವ ಕಾನೂನು ಇದ್ದರೂ ಇದನ್ನು ಗಾಳಿಗೆ ತೂರಲಾಗಿದೆ. ಲ್ಯಾಪ್‌ಟಾಪ್ ಖರೀದಿ ಬಗ್ಗೆ ಸಂಸ್ಥೆಗೆ ಮತ್ತು ಬುಲೆಟಿನ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆದರೆ ಇದನ್ನು ಅನುಸರಿಸದೆ ಅಕ್ರಮ ಎಸಗಲಾಗಿದ್ದು, ಕೂಡಲೇ ಸರ್ಕಾರ ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.