ಕರ್ನಾಟಕ

karnataka

ETV Bharat / city

ಗೆಲ್ಲುವವರೆಗೆ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ: ಸತೀಶ ಜಾರಕಿಹೊಳಿ‌ - ಯಮಕನಮರಡಿ ಕ್ಷೇತ್ರದಿಂದ ಜಾರಕಿಹೊಳಿ ಪುತ್ರ, ಪುತ್ರಿ ಕಣಕ್ಕೆ

ಯಮಕನಮರಡಿ ಕ್ಷೇತ್ರದಿಂದ ಪುತ್ರ ರಾಹುಲ್ ಜಾರಕಿಹೊಳಿ ಅಥವಾ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

satish-jarakiholi
satish-jarakiholi

By

Published : Oct 7, 2021, 2:38 AM IST

ಬೆಳಗಾವಿ:ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವವರೆಗೆ ಕಾಂಗ್ರೆಸ್​​ನಿಂದ ನಾನೇ ಅಭ್ಯರ್ಥಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬರುವ ವಿಧಾನಸಭೆ ಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ. ನಂತರ ನಡೆಯುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವೆ. ಗೆಲ್ಲುವವರೆಗೆ ನಾನೇ ಕಾಂಗ್ರೆಸ್ ‌ಅಭ್ಯರ್ಥಿ ಎಂದರು. ಒಂದು ವೇಳೆ ಗೆದ್ದರೆ ಯಮಕನಮರಡಿ ವಿಧಾನಸಭೆ ಉಪಚುನಾವಣೆಯಲ್ಲಿ ಪುತ್ರ ರಾಹುಲ್ ಜಾರಕಿಹೊಳಿ ಅಥವಾ ಪ್ರಿಯಾಂಕಾ ಜಾರಕಿಹೊಳಿ ಪೈಕಿ ಯಾರು ಸ್ಪರ್ಧಿಸಬೇಕು ಎಂಬುದು ಕ್ಷೇತ್ರದ ಜನರಿಗೆ ಬಿಟ್ಟಿದ್ದು ಎಂದರು.

ಜಿಲ್ಲೆಯಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆಯ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧಿಸಲಿದೆ. ಜಿಲ್ಲೆಯಲ್ಲಿ ಎರಡು ವಿಧಾನ ಪರಿಷತ್ ಸ್ಥಾನಗಳಿದ್ದು, ಇಬ್ಬರು ಸ್ಪರ್ಧೆ ಮಾಡಿದರೇ ನಮ್ಮಲ್ಲೇ ಪೈಪೋಟಿ ಏರ್ಪಡುತ್ತದೆ. ಹೀಗಾಗಿ, ಒಂದೇ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮದೇ ಆದ ವೋಟ್ ಬ್ಯಾಂಕ್ ಇದೆ. ಈಗಾಗಲೇ ಐದಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಕಳೆದ ಬಾರಿ ನಿಮ್ಮ ಪಕ್ಷದವರೇ ನಿಮ್ಮ ಅಭ್ಯರ್ಥಿಯನ್ನು ಸೋಲಿಸಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸೋಲಿಸುವ ಟೀಮ್ ಈಗಾಗಲೇ ನಮ್ಮ ಪಕ್ಷದಿಂದ ಹೊರಹೋಗಿದೆ. ಹೀಗಾಗಿ, ಈಗ ನಾವು ಆತಂಕಪಡುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಪಕ್ಷ ತೊರೆದಿದ್ದ ಅತೃಪ್ತ ಶಾಸಕರ ಬಗ್ಗೆ ವ್ಯಂಗ್ಯವಾಡಿದರು.

ಪೈಪೋಟಿ ಇರಬೇಕು:ವಿರೋಧಿಗಳು ಯಾವಾಗಲೂ ಇರಬೇಕು. ಅಂದಾಗ ನಾವು ಎಚ್ಚರಿಕೆಯಿಂದ ಇರುತ್ತೇವೆ. ಆದರೆ, ಹೇಳಿಕೆಗಳು ಸರಿಯಾದ ದಾಟಿಯಲ್ಲಿ ಇರಬೇಕು. ಜನ ಒಪ್ಪುವ ರೀತಿಯಲ್ಲಿರಬೇಕು. ಮೈಕ್ ಇದೆ ಎಂದು ಕೊಲ್ಲಾಪುರ, ಪಂಡರಾಪುರ, ವಿಜಯಪುರ ಸುತ್ತಿ ಬೆಳಗಾವಿಯಲ್ಲಿ ಬಂದು ಹೇಳಿಕೆ ನೀಡುವುದಲ್ಲ. ಪೈಪೋಟಿ ಆರೋಗ್ಯಕರವಾಗಿರಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಅವರಿಗೆ ಸತೀಶ ಟಾಂಗ್ ನೀಡಿದರು.

ಜನರೇ ತಕ್ಕ ಪಾಠ ಕಲಿಸಲಿದ್ದಾರೆ:
ಉತ್ತರ ಪ್ರದೇಶದಲ್ಲಿ ಕೊಲೆ ಪ್ರಕರಣಗಳು ಹೊಸತಲ್ಲ. ಅಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಖಾನಾಪುರದಲ್ಲಿ ಇತ್ತೀಚೆಗೆ ಕೊಲೆಯಾಗಿರುವ ಅರ್ಬಾಜ್ ಪ್ರಕರಣದ ಕುರಿತು ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಲಾಗುವುದು. ಸತ್ಯಾಸತ್ಯತೆ ಪೊಲೀಸರು ಬಯಲಿಗೆ ತರಬೇಕು. ಈ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ಈ ಬಗ್ಗೆ ಗಮನಹರಿಸಲಾಗುವುದು ಎಂದರು.

ABOUT THE AUTHOR

...view details