ಬೆಳಗಾವಿ: ಕಾಂಗ್ರೆಸ್ ಎಂಬ ಹಡಗು ದಡ ಸೇರುವುದೋ ಇಲ್ಲವೋ ಗೊತ್ತಿಲ್ಲ. ಅದು ಸುರಕ್ಷಿತವಾಗಿದೆಯೇ ಎಂದು ಹಡಗು ನಡೆಸುವವರನ್ನು ಕೇಳಬೇಕು, ಎಲ್ಲವನ್ನು ಸರಿಮಾಡಿಕೊಳ್ಳಲು ಒಂದು ಅವಕಾಶ ಕೊಟ್ಟಿದ್ದೇನೆ ಎಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಸುದ್ದಿಗಾರರಿಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಡಗನ್ನು ನಾನು ಹತ್ತಲಿಕ್ಕೇ ಹೋಗಿಲ್ಲ. ಅದು ದಡ ಸೇರುತ್ತೋ ಇಲ್ವೋ ಎಂದು ದೂರಿದಿಂದ ನೋಡುತ್ತಿದ್ದೇನೆ ಎಂದರು.
ಯಾವ ಬೈ ಎಲೆಕ್ಷನ್‌ನಲ್ಲಿಯೂ ನಾನು ಭಾಗವಹಿಸಲಿಲ್ಲ. ನೀವು ಮುಳುಗುತ್ತೀರಿ ಎಂದು ನಾನು ಹೇಳಿದ್ದೆ, ನಾ ದೂರವಾದಾಗಿನಿಂದ ಕಾಂಗ್ರೆಸ್ ಬೀಳುತ್ತಾ ಬಂದಿದೆ. ಅಸೆಂಬ್ಲಿ ಎಲೆಕ್ಷನ್ ವೇಳೆ ತಪ್ಪಾಗುತ್ತಿದೆ ಸರಿಪಡಿಸಿಕೊಳ್ಳಿ ಎಂದಿದ್ದೆ. ಸಿದ್ದರಾಮಯ್ಯ ಇಂದಿಗೂ ನನ್ನ ಆತ್ಮೀಯರೇ, ಆತ್ಮೀಯತೆ ಬಿಟ್ಟಿಲ್ಲ. ಆದರೆ, ನಾವು ಬೇರೆ ಚಿಂತನೆ ಮಾಡುತ್ತಿದ್ದೇವೆ ಎಂದರು.
ಮಾಧ್ಯಮಗಳೊಂದಿಗೆ ಮಾತನಡಿದ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಬಿಜೆಪಿ ಪಕ್ಷಕ್ಕೆ ಆಹ್ವಾನ ಸಿಕ್ಕರೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯವರು ಗುಡಿ, ಗುಂಡಾರ, ಭಂಡಾರ ಇದರಲ್ಲೇ ಇದ್ದಾರೆ. ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ ಬಗ್ಗೆ ಅವರಿಗೆ ಯೋಚನೆಯೇ ಇಲ್ಲ ಎಂದರು.
ಜೆಡಿಎಸ್ ಸೇರ್ಪಡೆ ಬಗ್ಗೆ ಸಮಯ ಬಂದಾಗ ಹೇಳುತ್ತೇನೆ. ಪ್ರತಿಯೊಬ್ಬರಿಗೂ ಸರಿಮಾಡಿಕೊಳ್ಳಲಿ ಎಂದು ಅವಕಾಶ ಕೊಟ್ಟಿದ್ದೇನೆ. ಯಾರು ಎಲ್ಲಿ ಸರಿ ಮಾಡಿಕೊಳ್ತಾರೋ ಅದರ ಮೇಲೆ ಡಿಪೆಂಡ್ ಆಗುತ್ತೆ. ಹಳೆಯ ಕಾಂಗ್ರೆಸ್ ಈಗಿಲ್ಲ, ಚಿಂತನೆಗಳು ಬದಲಾಗುತ್ತಿವೆ ಎಂದರು.
ಡಿ.ಕೆ.ಶಿವಕುಮಾರ್ ಸಹ ನಮ್ಮ ಆತ್ಮೀಯರೇ, ಎಲ್ಲರೂ ಒಗ್ಗೂಡಿ ಪಕ್ಷ ಕಟ್ಟೋಣ ಎಂದಿದ್ದಾರೆ. ಅವರಿಗೆ ಕೆಲವು ಸಲಹೆ ಕೊಟ್ಟಿದ್ದೇನೆ. ಏನು ಚಿಂತನೆ ಮಾಡ್ತಾರೆ ನೋಡೋಣ ಎಂದರು.
ಕಾಂಗ್ರೆಸ್ ಪಕ್ಷ ತೊರೆಯುವ ವಿಚಾರವಾಗಿ ಮಾತನಾಡಿ, ನನ್ನದೇ ಆದ ಪಕ್ಷ ಕಟ್ಟಲು ನನ್ನ ಹತ್ತಿರ ಶಕ್ತಿಯೂ ಇಲ್ಲ, ದುಡ್ಡೂ ಇಲ್ಲ. ಮಹಾತ್ಮ ಗಾಂಧಿಯನ್ನು ಚುನಾವಣೆಗೆ ನಿಲ್ಲಿಸಿದರೂ ಐದು ಕೋಟಿ ಬೇಕು. ವ್ಯವಸ್ಥೆಯನ್ನು ಹಾಳು ಮಾಡಿ ಇಟ್ಟಿದ್ದಾರೆ. ಎಲ್ಲಿ ಭದ್ರವಾದ ಬುನಾದಿ ಇದೆ ಅದನ್ನು ನೋಡಿಕೊಳ್ಳಬೇಕು, ಜೆಡಿಎಸ್ ಪಕ್ಷದವರ ಜೊತೆಯೂ ಮಾತನಾಡಿದ್ದೇನೆ. ದೇವೇಗೌಡರು ಹಾನೆಸ್ಟ್ ರಾಜಕಾರಣಿ ಅವರಿಗೂ ಗೌರವ ಕೊಡುತ್ತಾ ಬಂದಿದ್ದೇನೆ ಎಂದರು.