ಬೆಳಗಾವಿ :ವಾಯವ್ಯದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯಸಭೆಯಲ್ಲಿ ಕೂಡ ಲೆಹರ್ ಸಿಂಗ್ ಸೇರಿ ಮೂರು ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಯಾವುದೇ ಗೊಂದಲ ನಮ್ಮಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಇಡೀ ಜಗತ್ತೇ ಮೆಚ್ಚಿದೆ. ನರೇಂದ್ರ ಮೋದಿ ಹೆಸರು ನಮ್ಮ ಗೆಲುವಿಗೆ ಕಾರಣವಾಗುತ್ತೆ. ನಿಶ್ಚಿತವಾಗಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಗೆಲ್ಲುತ್ತೇವೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 140ರಿಂದ 150 ಸ್ಥಾನ ಗೆಲ್ಲುತ್ತೇವೆ. ಕರ್ನಾಟಕದಲ್ಲಿ ಬಿಜೆಸಿ ಸರ್ಕಾರ ತರಲು ಶಕ್ತಿಮೀರಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಆ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಗೊಂಡಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲಿ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಇನ್ನೂ ನಾವು ಯಾವುದೇ ನಿರ್ಧಾರ ಮಾಡಿಲ್ಲ. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ನೋಡುತ್ತೇವೆ. ಪ್ರಧಾನಿ ಮೋದಿ ನೀಡುವ ನಿರ್ದೇಶನದಂತೆ ಚುನಾವಣೆ ನಡೆಯಲಿದೆ ಎಂದು ಬಿಎಸ್‌ವೈ ಹೇಳಿದ್ರು.
ಮುಂಬರುವ ಚುನಾವಣೆಯಲ್ಲಿ ಬಿಎಸ್‌ವೈ ಮುಖಂಡತ್ವ ವಹಿಸ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಮುಖಂಡತ್ವ ಪ್ರಶ್ನೆ ಇಲ್ಲ, ಸಾಮೂಹಿಕ ನೇತೃತ್ವದಲ್ಲಿ ಎಲ್ಲ ಕಡೆ ಪ್ರವಾಸ ಮಾಡುತ್ತೇವೆ. ಮುಂಬರುವ ಎಲ್ಲ ಚುನಾವಣೆ ಗೆಲ್ಲಲು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮತದಾರರು ಮೋದಿ ಮತ್ತು ಬಿಜೆಪಿ ಜೊತೆ ಇರುವುದರಿಂದ ಯಾವುದೇ ಆತಂಕವಿಲ್ಲ. ಯಾವಾಗ, ಎಲ್ಲಿ ಕರೆದರೂ 24 ಗಂಟೆಯೂ ಪ್ರವಾಸ ಮಾಡಲು ನಾನು ರೆಡಿಯಿದ್ದೇನೆ. ಇನ್ನೂ ಹತ್ತು ವರ್ಷ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಯಾವುದೇ ಕಾರ್ಯಕರ್ತರಿಗೆ ನೋವಾಗುವ ಪ್ರಶ್ನೆಯೇ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಸಿದ್ದರಾಮಯ್ಯ ಡೆಸ್ಪರೇಟ್ ಆಗಿದ್ದಾರೆ. ಹೀಗಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ, ಚುನಾವಣೆಯಲ್ಲಿ ಸೋಲು ನಿಶ್ಚಿತ ಅನ್ನುವುದು ಗೊತ್ತಿರುವುದರಿಂದ ಹಗುರವಾಗಿ ಮಾತನಾಡ್ತಿದ್ದಾರೆ. ಆರ್‌ಎಸ್ಎಸ್ ಸೇರಿ ಹಲವು ವಿಷಯಗಳ ಬಗ್ಗೆ ಹಗುರವಾಗಿ ಮಾತನಾಡುವುದು ಅವರಿಗೆ ಚಟವಾಗಿದೆ. ಇದರಿಂದ ಅವರಿಗೇನು ಲಾಭ ಆಗಲ್ಲ. ಒಬ್ಬ ವಿಪಕ್ಷ ನಾಯಕನಾಗಿರುವ ಗೌರವವಿಲ್ಲದೆ, ಮಾಜಿ ಸಿಎಂ ಈ ರೀತಿ ಮಾತನಾಡ್ತಿದ್ದಾರೆ ಎಂದು ಜನ ಬೇಸತ್ತಿದ್ದಾರೆ. ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ ಎಂದಿರುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಪ್ರವಾಸ ಮಾಡಲು ಕುಮಾರಸ್ವಾಮಿ ಸ್ವತಂತ್ರರಿದ್ದಾರೆ. ಅವರ ಪಕ್ಷ ಬಲಪಡಿಸಲು ಅವರು ಪ್ರಯತ್ನಿಸಲಿ, ನಾವು ಸಹ ನಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತೇವೆ ಎಂದರು.
ಇದನ್ನೂ ಓದಿ :ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಗೆಲ್ಲುವುದು ಶತಸಿದ್ಧ: ಬಿಎಸ್‌ವೈ