ಬೆಳಗಾವಿ: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಸಂಬಂಧ ಧಾರ್ಮಿಕ ಸಂಕೇತಗಳನ್ನು ಸೂಚಿಸುವ ವಸ್ತ್ರಗಳನ್ನು ಧರಿಸುವ ಬಗ್ಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಕೆಲ ಶಾಲಾ-ಕಾಲೇಜುಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ನ್ಯಾಯಾಂಗ ನಿಂದನೆಯಾಗುತ್ತಿರುವುದು ಕಂಡುಬರುತ್ತಿದೆ. ಹಾಗಾಗಿ ನ್ಯಾಯಾಲಯದ ಆದೇಶವನ್ನು ಸೂಕ್ತವಾಗಿ ಪಾಲಿಸಲು ಕ್ರಮ ವಹಿಸಬೇಕು ಎಂದು ರಾಜ್ಯ ಹ್ಯೂಮನ್ ರೈಟ್ಸ್ ಅಡ್ವೋಕೇಟ್ಸ್ ಫೋರಂನ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ಕಾಲೇಜುಗಳ ಅಭಿವೃದ್ಧಿ ಮಂಡಳಿ (ಸಿಡಿಸಿ) ಸೂಚನೆಯ ಮೇರೆಗೆ ಇರುವ ಸಮವಸ್ತ್ರ ಸಂಹಿತೆ ಪಾಲಿಸಬೇಕು. ಸಮವಸ್ತ್ರ ಸಂಹಿತೆ ಇರುವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ವಸ್ತ್ರಸಂಹಿತೆ ನೀತಿ ಪಾಲಿಸಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ, ಕಾಲೇಜು ಅಭಿವೃದ್ಧಿ ಮಂಡಳಿಯೇ ಇಲ್ಲದ ಕಾಲೇಜುಗಳಲ್ಲಿ ಮತ್ತು ವಸ್ತ್ರಸಂಹಿತೆ ರೂಪಿಸಿರದ ಕಾಲೇಜುಗಳಲ್ಲಿ ಸಹ ಈಗ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ.