ಚಿಕ್ಕೋಡಿ:ವಿದ್ಯುತ್ ಸರಬರಾಜು ಇಲಾಖೆಯಿಂದ ಮನೆಗಳಿಗೆ ಮೀಟರ್ ಅಳವಡಿಕೆ ಮಾಡಲು ಟೆಂಡರ್ ತೆಗೆದುಕೊಂಡಿದ್ದ ಖಾಸಗಿ ಕಂಪನಿಯೊಂದು ಮೀಟರ್ಗಳನ್ನು ಗುಜರಿ ಅಂಗಡಿಗೆ ಹಾಕಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಗುಜರಿ ಅಂಗಡಿಯೊಂದರಲ್ಲಿ ರಾಶಿ ರಾಶಿ ವಿದ್ಯುತ್ ಮೀಟರ್ ಬಾಕ್ಸ್ಗಳು ಪತ್ತೆಯಾಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ರಾಯಬಾಗ ಹೆಸ್ಕಾಂ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಹೆಸ್ಕಾಂ ಅಧಿಕಾರಿ ಎ.ಎಸ್.ಮಾಖಾಣಿ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಯಬಾಗ ಪಟ್ಟಣದ ಗುಜರಿ ಅಂಗಡಿಯೊಂದರಲ್ಲಿ ರಾಶಿ ರಾಶಿ ವಿದ್ಯುತ್ ಮೀಟರ್ ಬಾಕ್ಸ್ಗಳು ಪತ್ತೆ ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚ ಮಾಡಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಅವುಗಳನ್ನು ಗುತ್ತಿಗೆ ಪಡೆದ ಕೆಲ ಖಾಸಗಿ ಕಂಪನಿಗಳು ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಹಿಂದೇಟು ಹಾಕುತ್ತಿರುವುದಲ್ಲದೇ ಸರ್ಕಾರಕ್ಕೆ ನಕಲಿ ದಾಖಲೆ ತೋರಿಸಿ ತಮಗೆ ಬರಬೇಕಾಗಿದ್ದ ಹಣವನ್ನು ಪಡೆದುಕೊಂಡು ಕೈತೊಳೆದುಕೊಳ್ಳುತ್ತಿರುವ ಆರೋಪವಿದೆ.
ಇದು ಅಕ್ರಮವಾಗಿದ್ದರೆ, ಅವ್ಯವಹಾರ ನಡೆದಿರುವುದು ನಿಜವಾಗಿದ್ದರೆ ತಕ್ಷಣವೇ ಅಂತಹ ಕಂಪನಿಗಳು ಲೈಸೆನ್ಸ್ ರದ್ದುಪಡಿಸಿ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.