ಬೆಳಗಾವಿ :ಆರ್‌ಎಸ್ಎಸ್ ಬಗ್ಗೆ ಮಾತನಾಡದಿದ್ದರೆ, ಕಾಂಗ್ರೆಸ್ ನಾಯಕರಿಗೆ ಊಟ ಮಾಡಿದ ಆಹಾರ ಜೀರ್ಣ ಆಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್ಎಸ್ ಸಂಘಟನೆ ಭಕ್ತಿ, ಭಾವನೆ ಬೆಳಸಿದೆ. ಆದ್ರೆ, ಬೇಕಾಬಿಟ್ಟಿಯಾಗಿ ನಮಗೆ ಅಧಿಕಾರ ಸಿಕ್ಕರೆ ಸಾಕು. ದೇಶ ಹಾಳಾಗಿ ಹೋಗಲಿ ಅಂತಾ ಯೋಚನೆ ಮಾಡಿರುವ ಕಾಂಗ್ರೆಸ್ ಅನ್ನು ಟಾರ್ಚ್ ಹಾಕಿಕೊಂಡು ಹುಡುಕಬೇಕು. ಆದರೂ ಇವರಿಗೆ ಬುದ್ದಿ ಬಂದಿಲ್ಲ ಎಂದು ಕಿಡಿಕಾರಿದರು.
ಆರ್‌ಎಸ್ಎಸ್ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿರುವುದು.. ಕಾಂಗ್ರೆಸ್‌ನವರಿಗೆ ಬೇರೆ ನ್ಯೂಸ್ ಇಲ್ಲ. ಬೊಮ್ಮಾಯಿ ಸರ್ಕಾರದಲ್ಲಿ ಏನು ವಿವಾದ ಇದೆ?. ಯಾರ ಮೇಲೆಯೂ ಭ್ರಷ್ಟಾಚಾರ ಆರೋಪ ಮಾಡಲು ಸಾಧ್ಯ ಇಲ್ಲ. ಹೀಗಾಗಿ, ನನ್ನ ಹೆಸರು ಎಳೆದು ತಂದು ದುರುಪಯೋಗ ಮಾಡಲಾಗುತ್ತಿದೆ ಎಂದು ದೂರಿದರು.
ಬಿ ಕೆ ಹರಿಪ್ರಸಾದ್ ನಾರ್ಮಲ್ ಇಲ್ಲ: ಬಿ.ಕೆ ಹರಿಪ್ರಸಾದ್ ವಿವಾದಾತ್ಮಕ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಅವರು ನನ್ನ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ನಾಲಿಗೆ ಕುಲವನ್ನು ಹೇಳುತ್ತದೆ ಎಂದು ನಮ್ಮಲ್ಲಿ ಹಿರಿಯರು ಹೇಳ್ತಾರೆ. ಒಬ್ಬ ವಿಪಕ್ಷ ನಾಯಕನಾಗಿ ಒಂದು ಅಂತಸ್ತಿನಿಂದ ಮಾತನಾಡಬೇಕಾದ ವ್ಯಕ್ತಿ, ಏನೇನೋ ಮಾತನಾಡಿದ್ದಾರೆ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಲ್ಲದೇ, ನಾನ್ಯಾವುದೋ ಮತ್ತಿನಿಂದ ಮಾತನಾಡುತ್ತೇನೆ ಅಂತಾರೆ.
ನನಗೆ ಇವರ ಹಾಗೆ ನಾಲಿಗೆ ಹರಿ ಬಿಟ್ಟು ಏನೇನೋ ಮಾತನಾಡಲು ಬರೋದಿಲ್ಲ. ನಾನು ಹೊಣೆಗಾರಿಕೆ ಸ್ಥಾನದಲ್ಲಿದ್ದು, ಒಂದೊಂದು ಶಬ್ದ ಅಳೆದು ತೂಗಿ ಮಾತನಾಡಬೇಕಾಗುತ್ತದೆ. ನನ್ನ ಬಗ್ಗೆ ಗಾಂಜಾ ತಿಂದಿದಾನೆ ಅಂತಾ ಹೇಳುವ ಹರಿಪ್ರಸಾದ್ ಅವರು, ಹೊಟ್ಟೆಗೆ ಏನ್ ತಿಂದಿದ್ರು ಅಂತಾ ಹೇಳಲಿ?. ತಪಾಸಣೆಗೆ ಒಳಗಾಗಬೇಕಾಗುತ್ತದೆ. ಅವರು ಮಾತನಾಡುವುದು ನೋಡಿದರೆ ಅವರು ನಾರ್ಮಲ್ ಇಲ್ಲ ಅಂತಾ ಅನಿಸುತ್ತದೆ.
ಇವರ ಜೊತೆಗಾರರೇ ಮಾದಕ ವಸ್ತುಗಳ ಜಾಲದಲ್ಲಿ ಸಿಕ್ಕಾಕಿಕೊಂಡಿದಾರೆ. ಡಾರ್ಕ್ ವೆಬ್‌ನಿಂದ ತರಿಸಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಸಿಲುಕಿದ್ದಾರೆ. ಜೈಲಿಗೂ ಹೋಗಿದ್ದಾರೆ. ನನ್ನ ಬಗ್ಗೆ ಮಾತನಾಡಲು ಇವರಿಗೆ ನಾಚಿಕೆ ಆಗಬೇಕು. ನಾನು ಇದರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರವನ್ನು ಜನರಿಗೆ ಬಿಡುತ್ತೇನೆ ಎಂದು ಹೇಳಿದರು.
ಬಿ.ಕೆ ಹರಿಪ್ರಸಾದ್ ಟ್ವೀಟ್ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿರುವುದು.. ವಿಪಕ್ಷದವರು ನಿಮ್ಮನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಆರಗ ಜ್ಞಾನೇಂದ್ರ, ಟಾರ್ಗೆಟ್ ಅಲ್ಲ ಇವರಿಗೆ ಒಂದು ಸಲಿಗೆ ಭಾವನೆ. ನಾನು ಅವರ ಜತೆ ಸರಳವಾಗಿ ಬದುಕಿದ್ದೇನೆ. ಹಾಗಂತಾ, ಇವರು ಏನೇನೋ ಹೇಳಬೇಕು ಅಂತಾ ಇಲ್ಲ. ಇವರ ಕಾಲದಲ್ಲಿ ಏನೇನು ನಡೆದಿದೆ ಹೇಳಿ. ಟಿಪ್ಪು ಜಯಂತಿ ಮಾಡಿ ಎಷ್ಟು ಜನರನ್ನು ಸಾಯಿಸಿದರು.
ಇಡೀ ನಾಡಿನ ಉದ್ದಕ್ಕೂ ಕ್ಷೋಭೆ ನಿರ್ಮಾಣ ಆಗಿತ್ತು. ಯಾರು ಅಸಮರ್ಥರು?. ಡಾ. ರಾಜಕುಮಾರ್ ತೀರಿಕೊಂಡಾಗ ಇವರದ್ದೇ ಜಂಟಿ ಸರ್ಕಾರ ಇತ್ತು. ಫೈರಿಂಗ್‌ನಲ್ಲಿ ಎಷ್ಟು ಜನ ಸಾವನಪ್ಪಿದ್ದರು?. ಪುನೀತ್ ರಾಜ್‍ಕುಮಾರ್ ನಿಧನರಾದಾಗ ನಾವು ಹೇಗೆ ನಿಭಾಯಿಸಿದ್ದೇವೆ. ಒಂದು ಸಣ್ಣ ಪ್ರಕರಣದ ಬಗ್ಗೆ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ನಾನು, ನನ್ನ ಮುಖ್ಯಮಂತ್ರಿ ಹಾಗೂ ನಮ್ಮ ಕ್ಯಾಬಿನೆಟ್ನ ಅನೇಕ ಸಚಿವರು ರಾತ್ರಿ ಎರಡ್ಮೂರು ಗಂಟೆ ನಿದ್ದೆ ಮಾಡಲಿಲ್ಲ. ನಾವು ಕುಳಿತುಕೊಂಡಿದ್ದೆವು. ನಮಗೆ ಬದ್ಧತೆ ಇದೆ. ಆ ಕುಟುಂಬದವರು ನಮಗೆ ಅಭಿನಂದನೆ ಹೇಳಿದರು. ಹಿಂದೆ ರಾಜಕುಮಾರ್ ತೀರಿಕೊಂಡಾಗ ನಮಗೆ ಶವಸಂಸ್ಕಾರ ಮಾಡಲು ಬಿಟ್ಟಿರಲಿಲ್ಲ, ಅಷ್ಟೊಂದು ಕ್ಷೋಭೆ ನಿರ್ಮಾಣ ಆಗಿತ್ತು.
ಸದ್ಯ ನೀವು ಗೌರವದಿಂದ ಪುನೀತ್ ರಾಜಕುಮಾರ್ ಅವರನ್ನು ಕಳಿಸಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಬರೆದ ಪತ್ರ ಇನ್ನೂ ನನ್ನ ಬಳಿ ಇದೆ. ನಮ್ಮ ಸರ್ಕಾರ, ನಮ್ಮ ಗೃಹ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಇವರು ನನಗೆ ಸರ್ಟಿಫಿಕೇಟ್ ಕೊಡ್ತಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು, ಸಂವಿಧಾನ ಯಾರು ಉಲ್ಲಂಘಿಸಿದರೂ ಕ್ರಮ :ಅಹಿತಕರ ಘಟನೆಗೆ ಅವಕಾಶ ನೀಡದೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಬಿಎಸ್‌ವೈ ಸಲಹೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಖಂಡಿತ ಇಲ್ಲಿ ಧರ್ಮಗಳ ಪ್ರಶ್ನೆ ಬರಲ್ಲ, ಕಾಯ್ದೆ, ಸಂವಿಧಾನದ ಪ್ರಶ್ನೆ ಬರುತ್ತದೆ. ಕಾನೂನು ಹಾಗೂ ಸಂವಿಧಾನವನ್ನು ಯಾರು ಉಲ್ಲಂಘನೆ ಮಾಡುತ್ತಾರೋ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ನುಗ್ಗಿಕೇರಿ ಧರ್ಮ ವ್ಯಾಪಾರ ಪ್ರಕರಣ ಸಂಬಂಧ ಕ್ರಮಕೈಗೊಳ್ಳಲಿಲ್ವಾ?, ಎಫ್ಐಆರ್ ಆಗಲಿಲ್ವಾ?. ಇದು ಚುನಾವಣೆ ವರ್ಷ. ಕಾಂಗ್ರೆಸ್‌ನವರು ಏನ್ ಬೇಕಾದರೂ ಪ್ರಚೋದನೆ ಮಾಡುತ್ತಾರೆ. ಆದರೆ, ಯಾರೂ ಪ್ರಚೋದನೆಗೆ ಒಳಗಾಗಬಾರದು. ಎಲ್ಲಾ ಧರ್ಮದವರು ಸುಖ, ಸಂತೋಷದಿಂದ ಬದುಕಬೇಕು. ಆ ರೀತಿ ವಾತಾವರಣ ನಾವು ಸೃಷ್ಟಿ ಮಾಡಿಕೊಂಡು ಹೋಗಬೇಕು. ಯಾರು ಸಂವಿಧಾನವನ್ನು ಕಾಪಾಡುತ್ತಾರೋ ಅವರ ಜತೆಗೆ ಸರ್ಕಾರ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.