ಬೆಳಗಾವಿ/ಚಿಕ್ಕೋಡಿ:ಬೆಳಗಾವಿತಾಲೂಕಿನ ವಾಘವಾಡೆ ಗ್ರಾಮದಲ್ಲಿ ಮಾರ್ಕಂಡೇಯ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗ್ರಾಮದ ಬರ್ಮಾ ಪಾಟೀಲ್ ಎಂಬಾತ ಜಮೀನು ಕೆಲಸಕ್ಕೆ ತೆರಳಿದ್ದ ವೇಳೆ ಮಾರ್ಕಂಡೇಯ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಬಳಿಕ ಸೇತುವೆಯೊಂದರ ಸಮೀಪದಲ್ಲಿ ಮರದ ಟೊಂಗೆ ಹಿಡಿದುಕೊಂಡು ರಕ್ಷಣೆಗಾಗಿ ಕೂಗುತ್ತಿದ್ದ. ಯುವಕನ ಚೀರಾಟ ಕೇಳಿದ ವಾಘವಾಡೆ ಗ್ರಾಮಸ್ಥರು, ಹಗ್ಗದ ಮೂಲಕ ರಕ್ಷಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆ, ವೇದಗಂಗಾ ನದಿ ತುಂಬಿ ಹರಿಯುತ್ತಿದೆ. ಈ ನೀರು ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮಕ್ಕೆ ನುಗ್ಗಿದ್ದು, ಹಲವು ಮನೆಗಳು ಹಾಗೂ ದೇವಸ್ಥಾನ ಜಲಾವೃತಗೊಂಡಿವೆ. ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.
ಕುಡಚಿ ಸೇತುವೆ ಜಲಾವೃತ
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ನೀರು ಹೆಚ್ಚಳದಿಂದ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದ್ದು, ರಾಯಬಾಗ ತಾಲೂಕಿನ ಕುಡಚಿ-ಉಗಾರ ಮಧ್ಯೆಯಿರುವ ಸೇತುವೆ ಜಲಾವೃತವಾಗಿದೆ.
ಎಂ.ಕೆ.ಹುಬ್ಬಳ್ಳಿಯ ಗಂಗಾಂಬಿಕಾ ದೇವಸ್ಥಾನ ಮುಳುಗಡೆ
ಇನ್ನು, ನಿರಂತರ ಮಳೆಗೆ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯಿರುವ ಗಂಗಾಂಬಿಕಾ ದೇವಸ್ಥಾನ ಮುಳುಗಡೆಯಾಗಿದೆ. ಮಲಪ್ರಭಾ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ನದಿ ಪಾತ್ರದಲ್ಲಿನ ಬೆಳೆಗಳು ನಾಶವಾಗಿವೆ. ಇನ್ನು, ರಾಮದುರ್ಗ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲೂ ಪ್ರವಾಹ ಭೀತಿ ಎದುರಾಗಿದೆ.
ಅಂಜಲಿ ನಿಂಬಾಳ್ಕರ್ ಮನೆ ಎದುರಿನ ಪ್ರದೇಶ ಜಲಾವೃತ!
ಧಾರಾಕಾರ ಮಳೆಯಿಂದ ಕಳಸಾ ಹಳ್ಳ ಮೈದುಂಬಿ ಹರಿಯುತ್ತಿದೆ. ಕಣಕುಂಬಿ ಪಾರವಾಡ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಆಂಜನೇಯ ದೇಗುಲ ಜಲಾವೃತಗೊಂಡಿದೆ. ಮಲಪ್ರಭಾ ನದಿಯ ಪಕ್ಕದಲ್ಲಿ ಆಂಜನೇಯನ ದೇವಸ್ಥಾನ ಇದ್ದು, ಭಕ್ತರ ಪ್ರವೇಶ ನಿಷೇಧಿಸಲಾಗಿದೆ.
ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ಮಲಪ್ರಭಾ ನದಿ ಕೂಡ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಮಲಪ್ರಭಾ ನದಿ ನೀರು ಖಾನಾಪುರ ಪಟ್ಟಣಕ್ಕೆ ನುಗ್ಗುತ್ತಿದೆ. ಖಾನಾಪುರ ಪಟ್ಟಣದ ಹೊರವಲಯದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಮೀನು ಮಾರುಕಟ್ಟೆ ಕೂಡ ಜಲಾವೃತಗೊಂಡಿದೆ.