ಬೆಳಗಾವಿ :ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಮನೆಗಳಿಗೆ ಮತ್ತು ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಷ್ಟೇ ಅಲ್ಲ, ಅಕಾಲಿಕ ಮಳೆಗೆ ಬೆಳೆದ ತರಕಾರಿಯೂ ಸಹ ಹಾಳಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಬೆಳಗಾವಿಯಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆ.. ರಾತ್ರಿಯಿಡೀ ಸುರಿದ ಮಳೆ :ರಾತ್ರಿಯಿಡೀ ಸುರಿದ ಮಳೆಗೆ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ರುಕ್ಮಿಣಿನಗರದ ಜನತಾ ಫ್ಲಾಟ್‌ನ ಹತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮನೆಯಿಂದ ನೀರು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ರಾತ್ರಿಯಿಡೀ ಮಲಗದೇ ಪಂಪ್ ಸೆಟ್ ಮೂಲಕ ಜನರು ಮಳೆ ನೀರು ಹೊರ ಹಾಕಿದರು. ರಾತ್ರಿ ಸುರಿದ ಮಳೆಗೆ ಕುಂದಾನಗರಿ ಜನ ತತ್ತರಿಸಿದ್ದಾರೆ.
ಪಾಲಿಕೆ ಆಯುಕ್ತ ಘಾಳಿ ಸಿಟಿ ರೌಂಡ್ಸ್ :ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಿನ್ನೆಲೆ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಸಿಟಿ ರೌಂಡ್ಸ್ ಹಾಕಿದರು. ನಗರದಲ್ಲಿರುವ ಚರಂಡಿ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಶಾಸ್ತ್ರಿನಗರ, ವಡಗಾವಿ, ಶಹಾಪುರ ಸೇರಿ ವಿವಿಧೆಡೆ ಇರುವ ಚರಂಡಿ ನಾಲಾಗಳನ್ನ ಪರಿಶೀಲಿಸಿದರು.
ಓದಿ:ಮುಂದುವರಿದ ಮಳೆ: ಕೊಪ್ಪಳ, ವಿಜಯನಗರ ಶಾಲಾ ಕಾಲೇಜಿಗೆ ರಜೆ
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಘಾಳಿ, ನಾಲಾಗಳಲ್ಲಿ ಹೂಳೆತ್ತುವ ಕಾರ್ಯ ಆಗಿದೆಯೋ, ಇಲ್ವೋ ಎಂಬುದರ ಬಗ್ಗೆ ಪರಿಶೀಲಿಸಿದರು. ಕಳೆದ ವರ್ಷ ಮಳೆ ಬಂದ ವೇಳೆ ನಾಲಾದಲ್ಲಿ ಬೃಹತ್ ಪ್ರಮಾಣದಲ್ಲಿ ಕಸ ಸಂಗ್ರಹವಾಗಿ ಭಾರಿ ಅವಾಂತರ ಸೃಷ್ಟಿಯಾಗಿತ್ತು. ಈ ಹಿನ್ನೆಲೆ ನಾಲಾದಲ್ಲಿ ಎಲ್ಲಿಯಾದರೂ ಹೂಳೆತ್ತುವುದು ಬಾಕಿ ಇದೆಯಾ ಎಂಬುದರ ಬಗ್ಗೆ ಮಾಹಿತಿ ಪಡೆದರು.
ಮಳೆಗೆ ತರಕಾರಿ ಬೆಳೆದ ರೈತರು ಕಂಗಾಲು ತರಕಾರಿ ಬೆಳೆದ ರೈತರು ಕಂಗಾಲು :ಎಡಬಿಡದೆ ಸುರಿಯುತ್ತಿರುವ ಮಳೆ ರೈತರಿಗೆ ಒಂದೆಡೆ ಸಂತಸ ತಂದ್ರೆ ಮತ್ತೊಂದೆಡೆ ಸಂಕಷ್ಟ ತಂದಿದೆ. ರೈತರು ಬೆಳೆದ ತರಕಾರಿ ಬೆಳೆಗಳು ನೀರಿಗೆ ಹಾನಿಯಾಗಿವೆ. ಇತ್ತ ಮುಂಗಾರು ಬಿತ್ತನೆಗೆ ಮುಂದಾಗಿದ್ದ ರೈತರಿಗೆ ಅನುಕೂಲವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ವಡಗಾವಿ, ಹಲಗಾ, ಮಚ್ಛೆ, ಯಳ್ಳೂರ, ಬಸವನಕುಡಚಿ, ಕಡೋಲಿ, ಉಚಗಾಂವ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಮೆಣಶಿನಕಾಯಿ, ಟೊಮೊಟೋ, ಕೊತ್ತಂಬರಿ ಹಾಗೂ ವಿವಿಧ ತರಕಾರಿ ಬೆಳೆಗಳು ಮಳೆಗೆ ಹಾನಿಯಾಗಿವೆ.
ಎಕರೆಗೆ ಕನಿಷ್ಟ ಏನಿಲ್ಲವೆಂದರೂ 50 ಸಾವಿರ ರೂಪಾಯಿ ನಷ್ಟವಾಗಿದೆ. ಸಾಲಸೂಲ ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಮಳೆರಾಯ ದೊಡ್ಡ ಹಾನಿ ಮಾಡಿದ್ದಾನೆ. ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ. ಆದ್ದರಿಂದ ತಕ್ಷಣವೇ ಬೆಳೆ ಹಾನಿಯಾಗಿರುವ ಜಮೀನುಗಳನ್ನು ಸರ್ವೇ ಮಾಡಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.