ಬೆಳಗಾವಿ :ಚಲಿಸುತ್ತಿದ್ದ ವಾಹನದಿಂದ ಕೈ ಹೊರ ಹಾಕಿದ ಪರಿಣಾಮ ಅಪಘಾತದಲ್ಲಿ 6 ವರ್ಷದ ಹೆಣ್ಣು ಮಗುವಿನ ತುಂಡಾದ ಕೈಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
6 ವರ್ಷದ ಆಶಿಯಾ ಶೇಕ್ ಎಂಬ ಹೆಣ್ಣು ಮಗು, ಪಿರಣವಾಡಿಯಿಂದ ಬೆಳಗಾವಿಗೆ ಬಸ್ಸಿನಲ್ಲಿ ಬರುವ ವೇಳೆ, ಮಚ್ಚೆ ಗ್ರಾಮದ ಬಳಿ ಬಸ್ಸಿನ ಕಿಟಕಿಯಿಂದ ಕೈ ಹೊರ ಹಾಕಿ ಮಳೆ ನೀರಿನ ಜೊತೆ ಆಟವಾಡುತ್ತಿದ್ದಳು. ಈ ವೇಳೆ ಎದುರುಗಡೆಯಿಂದ ಬಂದ ಲಾರಿಗೆ ತಾಗಿ ಮಗುವಿನ ಬಲಗೈ ತುಂಡಾಗಿತ್ತು.
ನಗರದ ವಿಜಯಾ ಆರ್ಥೊ ಮತ್ತು ಟ್ರಾಮಾ ಸೆಂಟರ್‌ನಲ್ಲಿ ಯಶಸ್ವಿ ಕೈ ಜೋಡಣೆ ಮಾಡಲಾಗಿದ್ದು, ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ. ಡಾ. ರವಿ ಪಾಟೀಲ್ ಹಾಗೂ ತಜ್ಞರ ತಂಡ ಸತತ 6 ಘಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಗುವಿನ ಕೈ ಜೋಡಣೆ ಮಾಡಿದ್ದಾರೆ.
ಕೈ ಜೋಡಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಾ. ರವಿ ಪಾಟೀಲ್ ಮಾತನಾಡಿ, ಅಪಘಾತವಾದ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಣ್ಣ ಮಗುವಾದ ಕಾರಣ ಎಲುಬುಗಳ ಬೆಳವಣಿಗೆ ನಿಧಾನವಿರುತ್ತದೆ. ಜೊತೆಗೆ ಸಣ್ಣ ನರಗಳ ಜೋಡಣೆ ಮಾಡುವುದು ಸವಾಲಾಗಿತ್ತು. ಇದೆಲ್ಲವನ್ನೂ ಮೆಟ್ಟಿನಿಂತು ಯಶಸ್ವಿ ಶಸ್ತ್ರಚಿಕಿತ್ಸೆಗೆ ಮಾಡಲಾಗಿದೆ ಎಂದರು.
ಬಾಲಕಿಯ ಮೊಗದಲ್ಲಿ ಮಂದಹಾಸ ತಂದ ಬೆಳಗಾವಿ ವಯದ್ಯರು ವ್ಯಕ್ತಿಯ ಅಂಗಾಂಗ ತುಂಡಾದಾಗ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳೇನು?
ಅಪಘಾತವಾದ ಸಂದರ್ಭದಲ್ಲಿ ದೇಹದ ಯಾವುದೇ ಭಾಗ ತುಂಡಾದರೆ, ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ತುಂಡಾದ ಅಂಗಾಂಗಗಳನ್ನು ಕವರ್ನಲ್ಲಿ ಹಾಕಿ ಐಸ್ನಲ್ಲಿಟ್ಟು ಆಸ್ಪತ್ರೆಗೆ ಸಾಗಿಸಬೇಕು. ಅಂಗಾಂಗಗಳಲ್ಲಿ ಸಣ್ಣ ಜೀವಕೋಶಗಳಿಗೆ ಹಾನಿಯಾಗದಂತೆ ತಡೆದರೆ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲು ಸಹಕಾರಿಯಾಗುತ್ತದೆ. ಜೊತೆಗೆ ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಆದಷ್ಟು ಬೇಗ ಆಸ್ಪತ್ರೆಗೆ ಸಾಗಿಸಬೇಕು ಎಂದು ಡಾ. ರವಿ ಪಾಟೀಲ್ ಸಲಹೆ ನೀಡಿದ್ದಾರೆ.