ಬೆಳಗಾವಿ: ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರ ಹೋರಾಟವನ್ನು ಕೂಡಲೇ ಹಿಂಪಡೆಯಿರಿ ಎಂದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣ ಗಾರ್ಡನ್ನಲ್ಲಿ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾವಿರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಭೇಟಿ ನೀಡಿ ಹೋರಾಟಗಾರರ ಮನವಿ ಆಲಿಸಿದರು. ಈ ವೇಳೆ ಮಾತನಾಡಿ, ಉಪನ್ಯಾಸಕರ ಪರವಾಗಿ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಳ್ಳುತ್ತಿದ್ದೇವೆ. ಯಾರನ್ನು ಹೊರತು ಪಡಿಸಿ ಕೆಲಸ ಮಾಡಬಾರದೆಂಬ ಕಾರಣಕ್ಕೆ ವಿಪಕ್ಷದವರನ್ನೂ ಸೇರಿಸಿ ವಿಶ್ವಾಸಕ್ಕೆ ತಗೆದುಕೊಳ್ಳುವೆ. ಆದರೆ, ಇಂದು ನೀವು ಸೇರಿದ್ದು ನನಗೆ ಆಶ್ಚರ್ಯವಾಗಿದೆ ಎಂದರು.
ನ್ಯಾಯ ಒದಗಿಸಲು ಬದ್ಧರಿದ್ದೇವೆ:
ಈ ವೇಳೆ ಬೇಕೆ ಬೇಕು ನ್ಯಾಯ ಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಿಮಗೆ ಕೊಡಬೇಕಾದ ನ್ಯಾಯ ಕೊಡಲು ನಾವು ಸಂಪೂರ್ಣ ಬದ್ಧರಿದ್ದೇವೆ. ನೀವು ಯೋಚನೆ ಮಾಡುವ ಮುಂಚೆಯೇ ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದೇವೆ. ನಿಮ್ಮ ಐದು ತಿಂಗಳ ಬಾಕಿ ಸಂಬಳ ಕೊಡಲಿಲ್ವಾ ಎಂದು ಇದೇ ವೇಳೆ ಪ್ರಶ್ನಿಸಿದರು.