ಬೆಳಗಾವಿ :ಕೋವಿಡ್ ಮಾರ್ಗಸೂಚಿಗಳನ್ವಯ ಸರಳವಾಗಿ ಜಿಲ್ಲೆಯಾದ್ಯಂತ ಮನೆ ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಯಿತು. ತುಂತುರು ಮಳೆಯ ನಡುವೆ ವಾದ್ಯಮೇಳಗಳೊಂದಿಗೆ ಆಗಮಿಸಿದ ಸಾರ್ವಜನಿಕರು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಮನೆಗಳಲ್ಲಿ ಸ್ಥಾಪಿಸಲು ಗಣೇಶನ ಮೂರ್ತಿಗಳನ್ನತೆಗೆದುಕೊಂಡು ಹೋದರು.
ಕೊರೊನಾ ಭೀತಿ ಮಧ್ಯೆಯೇ 380ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಕೋವಿಡ್ ಮೂರನೇ ಅಲೆ ಭೀತಿ ಜೊತೆಗೆ ಪ್ರಸಕ್ತ ವರ್ಷದಲ್ಲಿ ಸಂಭವಿಸಿದ ಪ್ರವಾಹದಿಂದ ನಲುಗಿದ ಜಿಲ್ಲೆಯ ಜನರು ಸರಳ ಸುಂದರ ರೀತಿಯಲ್ಲಿ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೇ ಇರೋದು ಕಂಡು ಬಂತು.
ಇತ್ತ ಮೂರ್ತಿ ತಯಾರಕರು, ಕಲಾವಿದರು ಕಳೆದ ಒಂದು ತಿಂಗಳುಗಳಿಂದ ಸಾಕಷ್ಟು ಶ್ರಮವಹಿಸಿ ವಿವಿಧ ಆಕರ್ಷಕ ವಿನ್ಯಾಸಗಳ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಗಣೇಶನ ವ್ಯಾಪಾರ-ವಹಿವಾಟು ಕಡಿಮೆ ಇದ್ದರೂ ಗಣೇಶ ಮೂರ್ತಿಗಳ ಬೆಲೆ ಮಾತ್ರ ದುಬಾರಿ ಆಗಿದೆ. ಜನರು ಸಂತೋಷದಿಂದ ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋದರು.
380ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ :ಬೆಳಗಾವಿ ಮಹಾನಗರವೊಂದರಲ್ಲಿಯೇ 380ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿಗಳು ಪ್ರತಿಷ್ಠಾಪನೆ ಮಾಡಲಾಗಿದೆ. ಕೋವಿಡ್ ಹಿನ್ನೆಲೆ ಐದು ದಿನಗಳವರೆಗೆ ಮಾತ್ರ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದ್ರೆ, ಬೆಳಗಾವಿಯಲ್ಲಿ ಸಂಪ್ರದಾಯದಂತೆ 11 ದಿನಗಳ ಗಣೇಶೋತ್ಸವ ಆಚರಣೆಗೆ ಗಣೇಶ ಮಂಡಳಿಗಳು ಸಿದ್ಧತೆ ಮಾಡಿಕೊಂಡಿವೆ.
ನಿನ್ನೆ 11ದಿನಗಳ ಉತ್ಸವಕ್ಕೆ ಅನುಮತಿ ನೀಡುವಂತೆ ಬೆಂಗಳೂರಿನಲ್ಲಿ ಸಿಎಂಗೆ ಶಾಸಕ ಅಭಯ ಪಾಟೀಲ್ ಭೇಟಿಯಾಗಿ ಮನವಿ ಮಾಡಿದ್ದರು. ಈ ವೇಳೆ ಸಿಎಂ 11 ದಿನಗಳ ಉತ್ಸವಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಅಭಯ ಹೇಳಿದ್ದರು. ಆದ್ರೆ, ಜಿಲ್ಲಾಡಳಿತದಿಂದ ಈವರೆಗೂ 11ದಿನಗಳ ಗಣೇಶೋತ್ಸವ ಆಚರಣೆಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ.
ಹೀಗಾಗಿ, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಮತ್ತೊಮ್ಮೆ ಗೊಂದಲಕ್ಕೆ ಸಿಲುಕಿದ್ದಾರೆ. ಸದ್ಯ ಮೌಖಿಕವಾಗಿ 11 ದಿನಗಳ ಗಣೇಶ ಪ್ರತಿಷ್ಠಾಪನೆಗೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ ಎನ್ನಲಾಗಿದ್ದು, ಅಧಿಕೃತ ಆದೇಶವನ್ನು ಸೋಮವಾರ ಹೊರಡಿಸಲಿದ್ದಾರೆ ಎನ್ನಲಾಗಿದೆ.