ಬೆಳಗಾವಿ:ಡೆತ್ನೋಟ್ ಬರೆದಿಟ್ಟು ಉಡುಪಿಯ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಅಂತ್ಯಕ್ರಿಯೆ ಬೆಳಗಾವಿ ತಾಲೂಕಿನ ಬಡಸ್ ಗ್ರಾಮದಲ್ಲಿ ಇಂದು ನಡೆಯಿತು. ಕಾಂಗ್ರೆಸ್ ನಾಯಕರ ತೀವ್ರ ವಿರೋಧದ ನಡುವೆಯೂ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸಂತೋಷ್ ಪಾಟೀಲ್ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇಂದು ಗ್ರಾಮದಲ್ಲಿ ಮೂರು ಮದುವೆ ಇದ್ದ ಕಾರಣ ಬೇಗ ಅಂತ್ಯಕ್ರಿಯೆ ಮುಗಿಸುವಂತೆ ಗ್ರಾಮಸ್ಥರು ಕೋರಿದ್ದರು. ಜೊತೆಗೆ ಮೃತ ಸಂತೋಷ್ ಸಂಬಂಧಿಕರು ಮೃತದೇಹದ ಮುಂದೆ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಕ್ಕಾಗಿ ಹೋರಾಟ ಮಾಡೋಣ. ಬಾಕಿ ಬಿಲ್ ಮಂಜೂರಾತಿ ಹಾಗೂ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸೋಣ ಎಂದು ಪ್ರತಿಭಟನಾಕರರಿಗೆ ಹೇಳಿದ್ದಾರೆ. ಬಳಿಕ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಜಮೀನಿಗೆ ತಂದು, ಲಿಂಗಾಯತ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.