ಬೆಳಗಾವಿ:ಮಹಾಮಾರಿ ಕೊರೊನಾ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟ ಜನತಾ ಕರ್ಫ್ಯೂಗೆ ಕುಂದಾನಗರಿಯಲ್ಲೂ ಭಾರಿ ಬೆಂಬಲ ಸಿಕ್ಕಿದೆ.
ಇಂದು ಮುಂಜಾನೆ 7 ರಿಂದ ಸಂಜೆ 5ರವರೆಗೆ ನಗರವಾಸಿಗಳು ಮನೆಯಲ್ಲೇ ಠಿಕಾಣಿ ಹೂಡಿದ್ದರು. ಸರಿಯಾಗಿ ಸಂಜೆ 5ಕ್ಕೆ ಹೊರಬಂದ ನಗರವಾಸಿಗಳು ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರಿಗೆ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು.
ಬೆಳಗಾವಿಯ ಚವಾಟ್ ಗಲ್ಲಿಯಲ್ಲಿ ಶಾಸಕ ಅನಿಲ್ ಬೆನಕೆ ಹಾಗೂ ವಿಶ್ವೇಶ್ವರಯ್ಯ ನಗರದಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಚಪ್ಪಾಳೆ ತಟ್ಟಿ, ತಟ್ಟೆ ಬಾರಿಸಿ ವೈದ್ಯರ ಕಾರ್ಯವನ್ನು ಶ್ಲಾಘಿಸಿದರು. ಬಳಿಕ ನಗರವಾಸಿಗಳು ಮತ್ತೆ ಮನೆ ಸೇರಿಕೊಂಡರು.
ಕುಂದಾನಗರಿಯಲ್ಲಿ ಜನತಾ ಕರ್ಫ್ಯೂಗೆ ಭಾರಿ ಬೆಂಬಲ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಈ ಅವಕಾಶ ಸದುಪಯೋಗಪಡಿಸಿಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು ನಗರವನ್ನು ಶುಚಿಗೊಳಿಸಿದರು. ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ನೇತೃತ್ವದಲ್ಲಿ ನೀರಿಗೆ ಕ್ಲೋರಿನ್, ಡೆಟಾಲ್ ಹಾಕಿ ನಗರದ ಪ್ರಮುಖ ರಸ್ತೆ, ದೇವಸ್ಥಾನ, ಬಸ್ ಶೆಲ್ಟರ್ಗಳನ್ನು ಶುಚಿಗೊಳಿಸಲಾಯಿತು. ಮಲ್ಟಿಪರ್ಪಸ್ ಜೆಟ್ಟಿಂಗ್ ಮಷಿನ್ ಇರುವ ಮೂರು ವಾಹನ ಸಹಾಯದಿಂದ ವೈರಾಣು ಹರಡದಂತೆ ನಗರವನ್ನು ಸಂಪೂರ್ಣ ಶುಚಿಗೊಳಿಸಲಾಯಿತು.
ಜನತಾ ಕರ್ಪ್ಯೂಗೆ ಗಡಿ ಜಿಲ್ಲೆ ಬೆಳಗಾವಿ ಸಂಪೂರ್ಣ ಸ್ತಬ್ಧವಾಗಿತ್ತು. ಜಿಲ್ಲೆಯ ಜನರು ಮನೆಯಲ್ಲೇ ಕುಳಿತು ಕೊರೊನಾ ವೈರಾಣುವಿಗೆ ಸೆಡ್ಡು ಹೊಡೆದರು. ಮಹಾಮಾರಿ ನಿಯಂತ್ರಣಕ್ಕೆ ಜನರೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದು, ಆಶಾದಾಯಕ ಬೆಳವಣಿಗೆ.