ಗೋಕಾಕ್:ರಾಜೀನಾಮೆ ಕೊಟ್ಟಿರುವ ಅನರ್ಹ ಶಾಸಕರು, ಯಾವ ಕಾರಣಕ್ಕೆ ಭಿನ್ನಾಭಿಪ್ರಾಯ ಮಾಡಿಕೊಂಡರು ಎಂಬುದನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸುತ್ತೇವೆ. ರಮೇಶ್ ಜಾರಕಿಹೊಳಿ ಹುಡುಗಾಟದ ರಾಜಕಾರಣಿ. ಅವರ ಪಾಪದ ಕೊಂಡ ತುಂಬಿದೆ. ಇಲ್ಲಿನ ಜನರು ಹೊಸ ರಾಜಕೀಯದ ಇತಿಹಾಸ ಬರೆಯಲು ನಿರ್ಧರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ಗೋಕಾಕ್ ಉಪಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿ ಮಾತನಾಡಿದ ಅವರು, ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿದ್ದರು. ಈ ಪುಣ್ಯಾತ್ಮ ಬಾಂಬೆಯಲ್ಲಿದ್ದ. ಸಂತ್ರಸ್ತರ ಬದುಕು ಏನಾಗಿದೆ ಎಂದು ರಾಜೀನಾಮೆ ಕೊಟ್ಟವರಾರಿಗೂ ಗೊತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಉಪಚುನಾವಣೆ ತಂದವರು. ಅವರನ್ನು ಗೆಲ್ಲಿಸಿದರೆ, ಬರುವ ಪ್ರಯೋಜನ ಏನು ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮದವರು ಬೆಳಗಾವಿಯ ಸಾಹುಕಾರ್ ಎನ್ನುತ್ತಾರೆ. ಅವರೇನು ದೊಡ್ಡ ಶ್ರೀಮಂತ ಅಲ್ಲ. ಇನ್ನೂ ಬೆಳಗಾವಿಯಲ್ಲಿ ಮೂರು ಲಕ್ಷ, ಗೋಕಾಕದಲ್ಲಿ 40 ಸಾವಿರ ರೈತರ ಸಾಲಮನ್ನಾ ಆಗಿದೆ. ಸಾಲಮನ್ನಾವಾದ ಮನೆಗಳಲ್ಲಿ ಮೂರು ಮತ ಬಿದ್ದರೂ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾನೆ. ನಮ್ಮಿಂದಾದ ಲೋಪಗಳಿಂದ ಅತೀ ಕಡಿಮೆ ಮತಗಳಿಂದ ಅಶೋಕ ಪೂಜಾರಿ 2008ರಲ್ಲಿ ಸೋಲನುಭವಿಸಿದರು. ಆದರೂ, ತಾಲೂಕಿನ ವ್ಯವಸ್ಥೆ ವಿರುದ್ಧ ಹೋರಾಟ ನಿರಂತರವಾಗಿದೆ ಎಂದು ಹೇಳಿದರು.
ಒಂದು ವಾರ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿ, ಎಲ್ಲ ವಿಷಯಗಳನ್ನು ಜನರ ಗಮನಕ್ಕೆ ತರುತ್ತೇನೆ. ರಾಜ್ಯದಲ್ಲಿ ಮೂರು ಪಕ್ಷಗಳಿಗೆ ಈ ಪರಿಸ್ಥಿತಿ ಅಗ್ನಿ ಪರೀಕ್ಷೆ ಆಗಿದೆ. ಯಾವ ಪಕ್ಷದೊಂದಿಗೂ ರಾಜಿ ಇಲ್ಲ. ಅಶೋಕ್ ಪೂಜಾರಿಯವರ ಗೆಲುವೆ ನನ್ನ ಮುಂದಿನ ಗುರಿ. ಮತ್ತೆ ಅಶೋಕ ಪೂಜಾರಿ ತವರು ಮನೆ ಸೇರಿದ್ದಾರೆ. 15 ವರ್ಷ ರಾಜಕೀಯದ ಕತ್ತಲೆ ಜೀವನ ಕಳೆದಿರುವ ಅವರು, 2020ಕ್ಕೆ ರಾಜಕೀಯ ಜೀವನ ಬೆಳಕಾಗಲಿದೆ ಎಂದರು.