ಬೆಳಗಾವಿ: ಅರಣ್ಯ ಸಚಿವರ ತವರು ಜಿಲ್ಲೆಯಲ್ಲೇ ಅರಣ್ಯ ವೀಕ್ಷಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬ ಮಾತು ಕೇಳಿಬಂದಿದೆ. ಕಾಡುಕೋಣವೊಂದು ಇರಿದು ಕೈ, ಬೆನ್ನೆಲುಬು ಮುರಿದುಕೊಂಡ ಅರಣ್ಯ ಇಲಾಖೆಯ ದಿನಗೂಲಿ ನೌಕರರೊಬ್ಬರು ಇತ್ತ ಕೆಲಸವಿಲ್ಲದೆ, ಅತ್ತ ಪರಿಹಾರವೂ ಇಲ್ಲದೇ ಅಲೆದಾಡುತ್ತಿದ್ದಾರೆ.
ಜಿಲ್ಲೆಯ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಕೃಷ್ಣ ಗುರವ್ ಎಂಬುವರು ಸಂಕಷ್ಟದ ಜೀವನ ಕಳೆಯುತ್ತಿದ್ದಾರೆ. ಮೇ 3 ರಂದು ಕೆಂಪಟ್ಟಿ ಗ್ರಾಮದ ಕಬ್ಬಿನ ಗದ್ದೆಗಳಲ್ಲಿ ಕಾಡುಕೋಣಗಳು ಪ್ರತ್ಯಕ್ಷವಾಗಿದ್ದವು. ಈ ಬಗ್ಗೆ ಅರಣ್ಯ ಇಲಾಖೆಗೆ ಕೆಂಪಟ್ಟಿ ಗ್ರಾಮಸ್ಥರು ದೂರು ನೀಡಿದ್ದರು. ಚಿಕ್ಕೋಡಿ ಅರಣ್ಯ ಇಲಾಖೆ ರೇಂಜ್‌ನಲ್ಲಿ ದಿನಗೂಲಿ ಆಧಾರದಲ್ಲಿ ಅರಣ್ಯ ವೀಕ್ಷಕನಾಗಿ ಕೆಲಸ ಮಾಡ್ತಿದ್ದ ಕೃಷ್ಣ ಗುರವ್ ಸೇರಿ ಇತರೆ ಸಿಬ್ಬಂದಿಯನ್ನು ಕಾಡುಕೋಣ ಸೆರೆ ಹಿಡಿಯಲು ಕಳುಹಿಸಲಾಗಿತ್ತು.
ಈ ವೇಳೆ ಕೃಷ್ಣ ಗುರವ್ ಹೋಗಲು ನಿರಾಕರಿಸಿದ್ದಾರೆ. ಇದಕ್ಕೆ ಮೇಲಧಿಕಾರಿಗಳು ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿದ್ದಾರೆ ಎಂಬ ಆರೋಪವಿದೆ. ಕಾಡುಕೋಣ ಸೆರೆ ಹಿಡಿಯುವ ಬಗ್ಗೆ ಏನು ಗೊತ್ತೇ ಇಲ್ಲದ ಅಮಾಯಕ ದಿನಗೂಲಿ ನೌಕರನನ್ನು ಅಧಿಕಾರಿಗಳು ಕಳುಸಿದ್ದಾರೆ. ಕಾರ್ಯಾಚರಣೆ ನಡೆಯುತ್ತಿದ್ದಾಗ ಕಾಡುಕೋಣ ಇರಿದು ಕೃಷ್ಣ ಗುರವ್ ಅವರ ಎಡಗೈ, ಬೆನ್ನೆಲುಬು ಮೂಳೆ ಮುರಿದು ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.