ಅಥಣಿ: ಸಂಕೋನಟ್ಟಿ ಗ್ರಾಮದಲ್ಲಿ 2 ವರ್ಷದ ಮಗು ಕಾಣೆಯಾಗಿರುವ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ.. ಸಂಕೋನಟ್ಟಿ ಗ್ರಾಮದ ಸದಾಶಿವ ಪಾರ್ಕ್ ಹತ್ತಿರ ಜೋಪಡಿಯಲ್ಲಿ ವಾಸಿಸುತ್ತಿದ್ದ ಯಲ್ಲಪ್ಪ ಚಿನ್ನಪ್ಪ ಬಹುರೂಪಿ ಅಲಿಯಾಸ್ ಬಾದಗಿ ಎಂಬುವರ 2 ವರ್ಷದ ಮಗು ಕಾಣೆಯಾಗಿರುವ ಕುರಿತು ಫೆ.6ರಂದು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಮಗುವನ್ನು ರಕ್ಷಿಸಿದ್ದಾರೆ.
ದಂಪತಿ ಮಕ್ಕಳಿಲ್ಲವೆಂದು ಹೇಳಿದಾಗ ಆರೋಪಿಗಳು ಅನಾಥಾಶ್ರಮದಿಂದ ಒಂದು ಮಗುವನ್ನು ಕೊಡುತ್ತೇವೆ ಎಂದು ಹೇಳಿ, ಎರಡು ಲಕ್ಷ ರೂ.ಗಳನ್ನು ಪಡೆದು ಸಂಕೋನಟ್ಟಿ ಗ್ರಾಮದ ಯಲ್ಲಪ್ಪ ಎಂಬುವರ ಮಗುವನ್ನು ಅಪಹರಿಸಿ, ಆ ದಂಪತಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.
ಪ್ರಶಾಂತ, ಜ್ಯೋತಿಬಾ, ಅನಿಲ, ಜಂಬುಸಾಗರ, ಕುಮಾರ ಎಂಬುವರು ಬಂಧಿತ ಆರೋಪಿಗಳು. ಬಂಧಿತರಿಂದ 60,500 ರೂ. ಹಾಗೂ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಎರ್ಟಿಗಾ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪೋಷಕರಿಗೆ ಒಪ್ಪಿಸಿದ್ದಾರೆ.
ಇನ್ನು ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಅಧೀಕ್ಷಕರಾದ ಅಮರನಾಥ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಎಸ್.ವಿ ಗಿರೀಶ್, ಸಿಪಿಐ ಶಂಕರಗೌಡಾ ಬಸನಗೌಡರ್,ಪಿಎಸ್ಐ ಕುಮಾರ ಹಾಡಕರ, ಐಗಳಿ ಪಿಎಸ್ಐ ಶಿವರಾಜ ನಾಯ್ಕೊಡಿ, ಕಾಗವಾಡ ಪಿಎಸ್ಐ ಹಣಮಂತ ದರ್ಮಟ್ಟಿ, ಸಿಬ್ಬಂದಿ ಎ.ಎ.ಈರಕರ, ಪಿ.ಬಿ.ನಾಯಕ, ಪಿ.ಎನ್.ಕುರಿ, ಬಿ.ವಾಯ ಮನ್ನಾಪುರೆ, ಜಿ.ಹೆಚ್.ಹೊನವಾಡ, ಆರ್.ಸಿ.ಹಾದಿಮನಿ, ಕೆ.ಬಿ.ಶೀರಗೂರ, ಶಿವಕುಮಾರ ದೊಡಮನಿ, ಎಸ್.ಬಿ.ಪಾಟೀಲ, ಸಂಜು ಮಾಳವಗೋಳ, ರೇಣುಕಾ ಮಾದರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಅಪಹರಣ ಪ್ರಕರಣವನ್ನು ಕೇವಲ ನಾಲ್ಕು ದಿನದಲ್ಲಿ ಪತ್ತೆ ಮಾಡಿದ್ದಕ್ಕಾಗಿ ತನಿಖಾ ತಂಡಕ್ಕೆ ಬೆಳಗಾವಿ ಎಸ್ಪಿ ಬಹುಮಾನ ಘೋಷಣೆ ಮಾಡಿದ್ದಾರೆ.