ಚಿಕ್ಕೋಡಿ :ಇದು ಬರೀ ಟ್ರೈಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಹೈ ಎಂದು ಕೃಷ್ಣಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ರೈತ ಮುಖಂಡ ಶಶಿಕಾಂತ್ ಪಡಸಲಗಿ ಎಚ್ಚರಿಕೆ ನಿಡಿದ್ದಾರೆ.
ರೈತ ಮುಖಂಡ ಶಶಿಕಾಂತ ಪಡಸಲಗಿ ಅವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಹಕಾರಿ ಸಂಘದ ಕೃಷ್ಣಾ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಕಬ್ಬಿನ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ.. 2018-2019 ಮತ್ತು 2019-2020ನೇ ಸಾಲಿನ ಎಫ್ಆರ್ಪಿ (ನ್ಯಾಯ ಮತ್ತು ಲಾಭದಾಯಕ ಬೆಲೆ) ಪ್ರಕಾರ ಆ ಹಂಗಾಮಿನ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ, ದರೂರ ಗ್ರಾಮದಿಂದ ಹಲ್ಯಾಳ ಸಕ್ಕರೆ ಕಾರ್ಖಾನೆವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ರೈತ ಮುಖಂಡ ಶಶಿಕಾಂತ ಪಡಸಲಗಿ ಅವರ ನೇತೃತ್ವದಲ್ಲಿ ಕೃಷ್ಣಾ ಸಕ್ಕರೆ ಕಾರ್ಖಾನೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.
ಈ ವೇಳೆ ಮಾತನಾಡಿದ ಶಶಿಕಾಂತ ಪಡಸಲಗಿ, ಕೃಷ್ಣಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ಹಣ ಪಡೆದು ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡುತ್ತಾರೆ. ನಿಮಗೆ ಬಹಿರಂಗ ಸವಾಲು ಹಾಕುತ್ತೇನೆ. ನನಗೆ ಯಾರು ಹಣ ನೀಡಿದ್ದೀರಿ ಎಂದು ಬಹಿರಂಗವಾಗಿ ಹೇಳುವಂತೆ ಕಾರ್ಖಾನೆ ಆಡಳಿತ ಮಂಡಳಿಗೆ ಸವಾಲು ಹಾಕಿದರು.
ಇದು ರೈತರ ಕಾರ್ಖಾನೆ. ಇದರ ಬಗ್ಗೆ ಕೇಳುವ ಸಂಪೂರ್ಣ ಅಧಿಕಾರ ರೈತರಿಗಿದೆ. ಕಳೆದ ಎರಡು ವರ್ಷದ ಹಿಂದೆ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದ ಸಹಕಾರ ಸಂಘಗಳು ಕೃಷ್ಣಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ದಿವ್ಯ ನಿರ್ಲಕ್ಷದಿಂದಾಗಿ ಇಂದು ಅವನತಿ ಅಂಚಿನಲ್ಲಿವೆ.
ಹೀಗಾಗಿ, ರೈತರು ಮಧ್ಯ ಪ್ರವೇಶಿಸಿ ಕಾರ್ಖಾನೆ ಸಂರಕ್ಷಿಸುವುದು ನಮ್ಮ ಹಕ್ಕು ಎಂದು ರೈತ ಮುಖಂಡ ಶಶಿಕಾಂತ ಪಡಸಲಗಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದ ಎಚ್ಚೆತ್ತುಕೊಂಡು ರೈತರಿಗೆ ನ್ಯಾಯಯುತ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.