ಬೆಳಗಾವಿ: ಮೆದುಳು ಜ್ವರದಿಂದಾಗಿ ಕೋಮಾ ಸ್ಥಿತಿಗೆ ತಲುಪಿದ್ದ ಉತ್ತರ ಕನ್ನಡ ಜಿಲ್ಲೆಯ ಬಾಲಕ ಸದ್ಯ ಕುಂದಾನಗರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜೋಯಿಡಾ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ನಗರದ ಯಶ್ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಆರೋಗ್ಯದಲ್ಲಿ ಚೇರಿಕೆ ಕಂಡುಬಂದಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
8 ವರ್ಷದ ಪುತ್ರ ಶೈಲೇಶ ಜೀವ ಉಳಿಸಲು ಪೋಷಕರು ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿ ಸುಸ್ತಾಗಿದ್ದರು. ಅಲ್ಲದೇ ಚಿಕಿತ್ಸೆಗೆ ಲಕ್ಷಾಂತರ ರೂ. ವ್ಯಯಿಸಿದ್ದರು. ಆದರೂ ಬಾಲಕ ಚೇತರಿಸಿಕೊಂಡಿರಲಿಲ್ಲ. ಹೀಗಾಗಿ ಪೋಷಕರು ಖಾನಾಪುರ ತಾಲೂಕಿನ ನಂದಗಡದಲ್ಲಿರುವ ಏಸುಕ್ರಿಸ್ತನ ಶಿಲುಬೆ ಎದುರು ಬಾಲಕನನ್ನು ಮಲಗಿಸಿದ್ದರು. ಪುತ್ರನ ಜೀವ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದ್ದರು.
ಈ ಬಗ್ಗೆ ಈಟಿವಿ ಭಾರತ "ಕೋಮಾದಲ್ಲಿರುವ ಮಗನ ಪ್ರಾಣ ಉಳಿಸಲು ದೇವರ ಮೊರೆ ಹೋದ ತಾಯಿ" ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈಟಿವಿ ಭಾರತ ವರದಿ ಓದಿದ ಬೆಳಗಾವಿ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಗೆಳೆಯರ ತಂಡದವರು ಬಾಲಕನ ನೆರವಿಗೆ ಧಾವಿಸಿ ಬೆಳಗಾವಿ ಖಾಸಗಿ (ಯಶ್) ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದರು.
ಇದನ್ನೂ ಓದಿ:ಬೆಳಗಾವಿ: ಕೋಮಾದಲ್ಲಿರುವ ಮಗನ ಪ್ರಾಣ ಉಳಿಸಲು ದೇವರ ಮೊರೆ ಹೋದ ತಾಯಿ
ಜಿಲ್ಲಾಧಿಕಾರಿ ನಿತೇಶ ಪಾಟೀಲ ಕೂಡ ಬಾಲಕನಿಗೆ ಉಚಿತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದರು. ಇಲ್ಲಿನ ಯಶ್ ಆಸ್ಪತ್ರೆಯಲ್ಲಿ ಬಾಲಕ ಕಳೆದ 12 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಡಾ. ಸಂಜೀವ್ ಪಾಟೀಲ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ವೈದ್ಯರು ಹಾಗೂ ಪೋಷಕರ ಖುಷಿಗೆ ಕಾರಣವಾಗಿದೆ.
ಇದನ್ನೂ ಓದಿ:'ಈಟಿವಿ ಭಾರತ' ವರದಿ ಫಲಶೃತಿ.. ಕೋಮಾದಲ್ಲಿದ್ದ ಬಾಲಕನ ನೆರವಿಗೆ ಬಂದ್ರು ಬೆಳಗಾವಿ ಫೇಸ್‌ಬುಕ್ ಫ್ರೆಂಡ್ಸ್
ಕೋಮಾಗೆ ಹೋಗಿದ್ದ ಬಾಲಕ:ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಕೃಷ್ಣಾ, ಮಹಾದೇವಿ ಸೂತ್ರವಿ ದಂಪತಿ ಪುತ್ರ ಶೈಲೇಶ್‌ಗೆ ಮೆದುಳು ಜ್ವರ ಕಾಣಿಸಿಕೊಂಡಿತ್ತು. ಶೈಲೇಶ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಇದಾದ ಬಳಿಕ ಆತನ ತಂದೆ-ತಾಯಿ ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಲಕ್ಷಾಂತರ ಹಣ ಖರ್ಚು ಮಾಡಿದ್ದರು.
ಆದರೆ ಮಗನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ. ಇದಾದನಂತರ ದಿಕ್ಕು ತೋಚದ ದಂಪತಿ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಶಿಲುಬೆ ಮುಂದೆ ಮಲಗಿಸಿ ಮಗುವನ್ನು ಉಳಿಸಿಕೊಡುವಂತೆ ಪರಿಪರಿಯಾಗಿ ದೇವರಲ್ಲಿ ಬೇಡಿಕೊಂಡಿದ್ದರು. ಆಗ ಬಾಲಕನ ನೆರವಿಗೆ ಧಾವಿಸಿದ್ದ ಬೆಳಗಾವಿ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು. ಬಳಿಕ ಬಾಲಕನನ್ನು ಖಾನಾಪುರದಿಂದ ಬೆಳಗಾವಿಯ ಯಶ್ ಆಸ್ಪತ್ರೆಗೆ ಕರೆತರಲಾಗಿತ್ತು.
ಇದನ್ನೂ ಓದಿ:ಕೋಮಾದಲ್ಲಿರುವ ಜೋಯಿಡಾ ಬಾಲಕ ಬೆಳಗಾವಿಗೆ ಶಿಫ್ಟ್: ಆರೋಗ್ಯ ವಿಚಾರಿಸಿದ ಡಿಹೆಚ್ಒ
ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿರೋದಕ್ಕೆ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್‌ನ ಮುಖ್ಯಸ್ಥ ಸಂತೋಷ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕನಿಗೆ ಉಚಿತ ಚಿಕಿತ್ಸೆ ನೀಡೋದಷ್ಟೇ ಅಲ್ಲದೇ ಇರಲೂ ವ್ಯವಸ್ಥೆ ಮಾಡಿದ ಯಶ್ ಆಸ್ಪತ್ರೆ ಆಡಳಿತ ಮಂಡಳಿಗೆ ಶೈಲೇಶ್ ತಾಯಿ ಮಹಾದೇವಿ ಕೃತಜ್ಞತೆ ಸಲ್ಲಿಸಿದ್ದಾರೆ.
ಅದೇನೇ ಇರಲಿ, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಾಲಕ ಶೈಲೇಶ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ. ಮಗುವಿನ ನೆರವಿಗೆ ನಿಂತ ಯಶ್ ಆಸ್ಪತ್ರೆ ಹಾಗೂ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಕಾರ್ಯ ಶ್ಲಾಘನೀಯ. ಈಟಿವಿ ಭಾರತ ವರದಿಗೆ ಸ್ಪಂದಿಸಿ ಬಾಲಕನ ಚಿಕಿತ್ಸೆಗೆ ನೆರವಾದ ಬೆಳಗಾವಿ ಫೇಸ್‌ಬುಕ್ ಫ್ರೆಂಡ್ಸ್, ವೈದ್ಯರು ಮತ್ತು ಜಿಲ್ಲಾಡಳಿತವನ್ನು ಅಭಿನಂದಿಸುತ್ತೇವೆ.