ಬೆಳಗಾವಿ:ರಾಜ್ಯದ ಎಲ್ಲ ಭಾಗಗಳಲ್ಲೂ ಸಮಾನವಾಗಿ ಉದ್ಯಮಗಳನ್ನು ಬೆಳೆಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ 400 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ) 'ಬಿಯಾಂಡ್ ಬೆಂಗಳೂರು' ಉಪಕ್ರಮದ ಅಂಗವಾಗಿ ಏರ್ಪಡಿಸಿದ್ದ 'ಸಿಇಒಗಳ ದುಂಡುಮೇಜಿನ ಶೃಂಗಸಭೆ'ಯಲ್ಲಿ ಮಾತನಾಡಿದ ಅವರು, ಬೆಳಗಾವಿಯು ಉದ್ಯಮಶೀಲತೆ, ಶೈಕ್ಷಣಿಕ ಸಂಸ್ಕೃತಿ ಮತ್ತು ಹಿತಕರ ಹವಾಮಾನ ಮೂರಕ್ಕೂ ಹೆಸರಾಗಿದೆ. ಇಲ್ಲಿ ಉದ್ದಿಮೆಗಳನ್ನು ಸಮೃದ್ಧವಾಗಿ ಪೂರ್ಣಪ್ರಮಾಣದಲ್ಲಿ ಬೆಳೆಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಘೋಷಿಸಿದ್ದು, ರಾಜ್ಯದಲ್ಲಿ ಇದು ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಜಾರಿಗೆ ಬರುತ್ತಿದೆ. ಈಗಾಗಲೇ ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಮತ್ತು ಪದವಿ ಹಂತಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಯನ್ನು ಅಳವಡಿಸಿಕೊಂಡಿದ್ದು, ಉದ್ದಿಮೆಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಹೇರಳವಾಗಿ ಲಭ್ಯವಾಗಲಿದೆ ಎಂದು ಹೇಳಿದರು.
ಸೂಪರ್-30 ಯೋಜನೆ:
ರಾಜ್ಯದಲ್ಲಿ ಸರಕಾರಿ ಎಂಜಿನಿಯರಿಂಗ್ ಮತ್ತು ಇವು ಇಲ್ಲದ ಕಡೆಗಳಲ್ಲಿ ಖಾಸಗಿ ಕಾಲೇಜುಗಳನ್ನು ವಿಶ್ವ ಮಟ್ಟಕ್ಕೆ ಸುಧಾರಿಸುವ ಸೂಪರ್-30 ಯೋಜನೆಯನ್ನು ರೂಪಿಸಲಾಗಿದೆ. ಇದರ ಜತೆಗೆ ಎಂಜಿನಿಯರಿಂಗ್ ಕಾಲೇಜುಗಳು ವಿಶ್ವದ ಯಾವುದೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಉದ್ದಿಮೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದನ್ನು ಉತ್ತೇಜಿಸಲಾಗುತ್ತಿದೆ. ಇದು ಸಮಾಜದಲ್ಲಿ ಪರಿವರ್ತನೆಯನ್ನು ತರಲಿದ್ದು, ಜಾಗತಿಕ ಮಟ್ಟದ ನಾಯಕತ್ವವನ್ನು ಸೃಷ್ಟಿಸಲಿದೆ ಎಂದು ವಿವರಿಸಿದರು.