ಕರ್ನಾಟಕ

karnataka

ETV Bharat / city

'ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿ ಮಾಡೋಣ': ಪೋಷಕರಿಗೆ ರಮೇಶ್ ಜಾರಕಿಹೊಳಿ‌ ಪತ್ರ - Educational year starts on May 16

ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ತರಗತಿಗೆ ಹೆಚ್ಚು ಹಾಜರಾಗುವ ನಿಟ್ಟಿನಲ್ಲಿ ಶಾಸಕ ರಮೇಶ ಜಾರಕಿಹೊಳಿ‌ ಸ್ವತಃ ಪಾಲಕರಿಗೆ ಮನವಿ ಪತ್ರ ಬರೆದಿದ್ದು, ಶಾಲಾ ಆರಂಭದ ಮೊದಲ ದಿನವೇ ಮಕ್ಕಳು ಶಾಲೆಗೆ ಹಾಜರಾಗುವಂತೆ ಪೋಷಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

Former Minister Ramesh Jarakiholi
ಮಾಜಿ ಸಚಿವ ರಮೇಶ್​ ಜಾರಕಿಹೊಳಿ

By

Published : May 16, 2022, 10:30 AM IST

Updated : May 16, 2022, 12:45 PM IST

ಬೆಳಗಾವಿ: ಇಂದಿನಿಂದ ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗುತ್ತಿದ್ದು ಮೊದಲ ದಿನವೇ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ 30 ಸಾವಿರ ಪೋಷಕರಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಗೋಕಾಕ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಜೊತೆಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ತರಗತಿಗಳು ಉಪಯುಕ್ತ. ಹೀಗಾಗಿ ಬರುವ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ತರಗತಿಗೆ ಹೆಚ್ಚು ಹಾಜರಾಗುವ ನಿಟ್ಟಿನಲ್ಲಿ ರಮೇಶ ಜಾರಕಿಹೊಳಿ‌ ಸ್ವತಃ ಪಾಲಕರಿಗೆ ಮನವಿ ಪತ್ರ ಬರೆದಿದ್ದು, ಶಾಲಾ ಆರಂಭದ ಮೊದಲ ದಿನವೇ ಮಕ್ಕಳು ಶಾಲೆಗೆ ಹಾಜರಾಗುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದ್ದಾರೆ.

ಪತ್ರದಲ್ಲೇನಿದೆ?:ಗೋಕಾಕ ಮತಕ್ಷೇತ್ರದ ಆತ್ಮೀಯ ಪಾಲಕ ಬಂಧುಗಳೇ, ನಿಮಗೆಲ್ಲ ಪ್ರೀತಿಯ ನಮಸ್ಕಾರಗಳು. ಶಿಕ್ಷಣ ಇಲಾಖೆ ಮಕ್ಕಳ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಿದೆ. 6ರಿಂದ 1ನೇ ವಯಸ್ಸಿನ ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗಬೇಕು. ಅವರಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಒಂದು ದಿನ ಅವರೆಲ್ಲ ನಾಡಿಗೆ ಶಕ್ತಿಯಾಗಬೇಕು ಎಂದು ಕನಸು ಕಂಡಿದೆ.

ಪೋಷಕರಿಗೆ ರಮೇಶ್ ಜಾರಕಿಹೊಳಿ‌ ಪತ್ರ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಕಳೆದೆರಡು ವರ್ಷಗಳಲ್ಲಿ ಕೊರೊನಾದಿಂದಾಗಿ ಮಕ್ಕಳ ಕಲಿಕೆ ಹಿಂದುಳಿದಿರಬಹುದು. ಈ ವರ್ಷ ಮೇ 16ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದು, ಎರಡು ವರ್ಷದ ಕಲಿಕಾ ಕೊರತೆ ನೀಗಿಸಲು ಶಿಕ್ಷಣ ಇಲಾಖೆ ಪ್ರಯತ್ನಪಡುತ್ತಿದೆ. ಶೈಕ್ಷಣಿಕ ವಲಯದ ಗುರುಬಳಗ ಕಾಳಜಿ ಮಾಡಿ ಶಿಕ್ಷಣ ನೀಡುವುದನ್ನು ಖುದ್ದಾಗಿ ಪರಿಶೀಲಿಸುತ್ತಿದ್ದೇನೆ. ಶಾಲಾ ಪ್ರಾರಂಭದ ದಿನ ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ.

ಏನೇ ತೊಂದರೆ ಇದ್ದರೂ ಶಾಲೆ ಬಿಡಿಸಬೇಡಿ. ಪ್ರತಿದಿನ ಶಾಲೆಗೆ ಹೋಗುವಂತೆ ಗಮನಹರಿಸಿ, ಶಾಲಾ ಶಿಕ್ಷಕರೊಂದಿಗೆ ಒಳ್ಳೆಯ ಒಡನಾಟ ಹೊಂದಿ ಮಕ್ಕಳ ಕಲಿಕೆ ಬಗ್ಗೆ ಆಗಾಗ ಖಚಿತಪಡಿಸಿಕೊಳ್ಳಿ. ಒಟ್ಟಿನಲ್ಲಿ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು, ನಾಳೆ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ, ಸಮಾಜದಿಂದ ಗೌರವ ಪಡೆಯುವಂತಾಗಲಿ. ನಾವು ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ಅವಶ್ಯಕತೆಗೆ ಅನುಗುಣವಾಗಿ ಕುಡಿಯುವ ನೀರು, ಹೊಸ ಕೊಠಡಿ ಹಾಗೂ ದುರಸ್ತಿ, ಆಟದ ಮೈದಾನ, ಶಾಲೆಗಳು ಸುಂದರವಾಗಿ ಕಾಣಲು ಮಕ್ಕಳಿಗೆ ಡೆಸ್ಕ್‌ ಇತ್ಯಾದಿ ಕೊಟ್ಟು ಸುಂದರವಾಗಿ ಕಾಣಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.

ಏನೇ ಆದರೂ ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯ ನೀಡಲು ನಮ್ಮ ಆದ್ಯತೆ. ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡೋಣ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡೋಣ.

ಇದನ್ನೂ ಓದಿ:ಬನ್ನಿ ಮಕ್ಕಳೇ ಶಾಲೆಗೆ.. ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಾರಂಭ; ಮಕ್ಕಳಿಗೆ ಅದ್ಧೂರಿ ಸ್ವಾಗತ

Last Updated : May 16, 2022, 12:45 PM IST

ABOUT THE AUTHOR

...view details