ಬೆಳಗಾವಿ: ಜಲ ಪ್ರವಾಹಕ್ಕೆ ಕುಂದಾನಗರಿ ಜನತೆ ಬೆಳೆ, ಮನೆ, ಆಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನು ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತಾಗಿದೆ.
ಅಬ್ಬರದ ಪ್ರವಾಹಕ್ಕೆ ಜಿಲ್ಲೆಯ 300 ಕ್ಕೂ ಅಧಿಕ ಗ್ರಾಮಗಳು ಮುಳುಗಡೆ ಆಗಿವೆ. ಮನೆಯಲ್ಲಿದ್ದ ಪೀಠೋಪಕರಣ, ಟಿವಿ, ಫ್ರಿಡ್ಜ್ ಜತೆಗೆ ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಸಂಪಾದಿಸಿದ್ದ ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ.
ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಕಳೆದುಕೊಂಡು ವಿದ್ಯಾರ್ಥಿಗಳು ಕಂಗಾಲು ಕಡು ಬಡತನದಲ್ಲಿ ಸಾಲಸೂಲ ಮಾಡಿ ಓದಿ ಸಂಪಾದಿಸಿದ್ದ ದಾಖಲೆ ಪತ್ರಗಳನ್ನು ಕಳೆದುಕೊಂಡು ಹಲವು ವಿದ್ಯಾರ್ಥಿಗಳು ಇದೀಗ ಕಣ್ಣೀರು ಹಾಕುತ್ತಿದ್ದಾರೆ. ನಕಲಿ ದಾಖಲೆ ಪ್ರಮಾಣಪತ್ರ ಪಡೆಯಲು ಸಹ ಹಣವಿಲ್ಲದೆ ನಿರಾಶ್ರಿತ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ನೆರೆಯಿಂದಾಗಿ ಕಳೆದುಕೊಂಡ ಸೂರಿನ ಜತೆಗೆ ಪ್ರಮಾಣ ಪತ್ರಗಳನ್ನು ಕೊಡಿಸುವಂತೆ ವಿದ್ಯಾರ್ಥಿಗಳು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಎಲ್ಲ ಪ್ರಮಾಣಪತ್ರಗಳೂ ನೀರುಪಾಲಾದ ಕಾರಣ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಲು ಆಗುತ್ತಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಅಳಲು ತೋಡಿಕೊಂಡಿದ್ದಾರೆ.