ಅಥಣಿ :ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪೂರ್ವ ಭಾಗದ ಕೃಷಿ ಜಮೀನುಗಳಿಗೆ ಕಾಲುವೆ ನೀರು ಹರಿಸುವಂತೆ ಈ ಭಾಗದ ರೈತರು ಒತ್ತಾಯಿಸಿದ್ದಾರೆ.
ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರಿಂದ ರೈತರಲ್ಲಿ ಆತಂಕ ಮನೆಮಾಡಿದೆ. ಮೇ ಕಡೆ ವಾರದಲ್ಲಿ ಮಳೆ ಆಗಿದ್ದರಿಂದ ರೈತರು ಬಿರುಸಿನಿಂದ ಬಿತ್ತನೆ ಪ್ರಾರಂಭ ಮಾಡಿದರು. ಮಳೆ ಕೈಕೊಟ್ಟ ಮೇಲೆ ರೈತರು ಪರ್ಯಾಯವಾಗಿ ಕೆನಾಲ್ ಪ್ರಾರಂಭಿಸಿ ಎಂದು ತಾಲೂಕು ಆಡಳಿತಕ್ಕೆ ಆಗ್ರಹಿಸಿದ್ದಾರೆ. ಭಾರತ್ ಕಿಸಾನ್ ಸಂಘದ ತಾಲೂಕು ಕಾರ್ಯಾಧ್ಯಕ್ಷ ಭರಮು ನಾಯಕ್ ಮಾತನಾಡಿ, ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ನಷ್ಟ ಸಂಭವಿಸಿದೆ.
ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ನಿಗದಿತ ದಿನಗಳು ಕಳೆದ್ರೂ ಕಾಲುವೆ ಮೂಲಕ ನೀರು ಹರಿಸಿಲ್ಲ. ಸಾವಿರಾರು ಹೆಕ್ಟೇರ್ ಬಿತ್ತನೆ ಮಣ್ಣು ಪಾಲಾಗುವ ಮೊದಲು ಕೆನಾಲ್ ಮುಖಾಂತರ ನಮಗೆ ನೀರು ಹರಿಸಿ ರೈತರ ಹಿತ ಕಾಪಾಡುವಂತೆ ಆಗ್ರಹಿಸಿದರು. ಈ ಕುರಿತು ಸ್ಥಳೀಯ ಶಾಸಕ ಮಹೇಶ್ ಕುಮಠಳ್ಳಿ ಅವರನ್ನು ಈಟಿವಿ ಭಾರತ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕಳೆದ ಕೃಷ್ಣಾ ನದಿ ಪ್ರವಾಹದಲ್ಲಿ ಹಿಪ್ಪರಗಿ ಅಣೆಕಟ್ಟಿಗೆ ಹೊಂದಿಕೊಂಡಿರುವ ಕೆನಾಲ್ ಗೇಟ್‌ಗಳ ರಿಪೇರಿ ಕಾರ್ಯ ಭರದಿಂದ ನಡೆದಿದೆ.
ಮೂರು ತಿಂಗಳಿಂದ ರಿಪೇರಿ ಕಾರ್ಯ ನಡೆಸುತ್ತಿದ್ದೇವೆ. ಕೆಲವು ತಾಂತ್ರಿಕ ದೋಷಗಳಿಂದ ನೀರು ಬಿಡಲು ವಿಳಂಬವಾಗಿದೆ. ಇನ್ನೆರಡು ದಿನದಲ್ಲಿ ಸಂಪೂರ್ಣವಾಗುತ್ತೆ. ಅಥಣಿ ಪೂರ್ವ ಭಾಗಗಳ ಕೆನಾಲ್ ಮುಖಾಂತರ ರೈತರ ಜಮೀನುಗಳಿಗೆ ನೀರು ಹರಿಸುತ್ತೇವೆ ಎಂದು ಈಟಿವಿ ಭಾರತ್‍ಗೆ ಸ್ಪಷ್ಟನೆ ನೀಡಿದರು.