ಅಥಣಿ(ಬೆಳಗಾವಿ): ಸಾಮಾನ್ಯವಾಗಿ ಜನರು ಪಾದಯಾತ್ರೆ ಮುಖಾಂತರ ದೇವರ ದರ್ಶನಕ್ಕೆ ತೆರಳುತ್ತಾರೆ. ಆದರೆ ಇಲ್ಲಿ ಸ್ವಾಮಿ ನಿಷ್ಠೆಗೆ ಹೆಸರಾಗಿರುವ ಶ್ವಾನ ಕೂಡ ತನ್ನ ಮಾಲೀಕನೊಂದಿಗೆ ಪಾದಯಾತ್ರೆ ಮೂಲಕ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಶಂಕ್ರಯ್ಯ ಮಠಪತಿ ಎಂಬುವರಿಗೆ ಸೇರಿದ ಶ್ವಾನ ಕಳೆದ ಏಳು ದಿನಗಳಿಂದ ಮಾಲೀಕರ ಜತೆ ಪಾದಯಾತ್ರೆಯಲ್ಲಿ ಸಾಗುತ್ತಿದೆ.
ರಾಯಚೂರು ಜಿಲ್ಲೆಯ ಕಬ್ಬರ್ ಮಾರ್ಗವಾಗಿ ಪಾದಯಾತ್ರೆ ಹೋಗುತ್ತಿದ್ದಾರೆ. ಅವರ ಜತೆಗೆ ಮನೆಯ ನಾಯಿ ಕೂಡ ಹಿಂಬಾಲಿಸುತ್ತಿದೆ. ಹೋಳಿ ಹುಣ್ಣಿಮೆಯ ದಿನ ಕಾಮನ ದಹನವಾದ ನಂತರ ಉತ್ತರ ಕರ್ನಾಟಕದ ಜನರು ಶ್ರೀಶೈಲ ಪಾದಯಾತ್ರೆ ಕೈಗೊಳ್ಳುವುದು ವಾಡಿಕೆ. ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆ ಮುಖಾಂತರ ಹೋಗುವಾಗ ಶ್ವಾನ ಹಿಂಬಾಲಿಸಿದೆ. ಮಾಲೀಕ ವಾಪಸ್ ಕಳುಹಿಸಲು ಎಷ್ಟೇ ಪ್ರಯತ್ನಪಟ್ಟರೂ ಸಹ ಅದು ಹಠ ಹಿಡಿದು ಪಾದಯಾತ್ರೆಯಲ್ಲಿ ಭಕ್ತಾದಿಗಳನ್ನು ಹಿಂಬಾಲಿಸಿದೆ.