ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮಾಜಿ ಡಿಸಿಎಂ ಜಿ ಪರಮೇಶ್ವರ್ ಸೇರಿದಂತೆ ಮತ್ತಿತರೆ ನಾಯಕರು ಭಾಗವಹಿಸಿದ್ದರು.
ಸಚಿವ ಭೈರತಿ ಬಸವರಾಜ್ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ ಧರಣಿ ನಡೆಸಿದ್ದ ಕಾಂಗ್ರೆಸ್ ನಾಯಕರು, ಇಂದು ಸಹ ಅದನ್ನು ಮುಂದುವರೆಸಲು ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಸಭೆಯ ಬಳಿಕ ನಡೆದ ಚರ್ಚೆಯ ವಿವರವನ್ನು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಆಗಲಿ ಅಥವಾ ಇತರೆ ಯಾವುದೇ ನಾಯಕರಾಗಲಿ ನೀಡಲಿಲ್ಲ.
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸುವ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದರ ಹಿಂದೆ ಎಂಇಎಸ್ ಇದೆ ಎಂದು ನಾನು ಹೇಳುವುದಿಲ್ಲ. ಯಾರೋ ಕಿಡಿಗೇಡಿಗಳು ಮಾಡಿದ್ದಾರೆ. ನಾನು ಏಕೆ ಒಂದು ಸಂಸ್ಥೆ ಬಗ್ಗೆ ಮಾತನಾಡಲಿ. ಆ ಸಂಸ್ಥೆ ಬ್ಯಾನ್ ಮಾಡಿ ಎಂದು ನಾನು ಏಕೆ ಹೇಳಲಿ?. ನನ್ನ ಹಿಂದೆ ಯಾರೋ ಬಂದ್ರೆ ಅವ ನನ್ನ ಬೆಂಬಲಿಗ ಎಂದು ತೋರಿಸುತ್ತಾರೆ. ನನ್ನ ಜತೆ ದಿನಾ ನೂರಾರು ಜನ ಫೋಟೋ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಸಿಎಂ ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅವರು, ಬೊಮ್ಮಾಯಿ ಅವರು ಅವರ ಕ್ಷೇತ್ರದಲ್ಲಿ ಮಾತಾಡಿದ್ದಾರೆ ಅದು ಸಹಜ. ನಾನು ಕೂಡ ನನ್ನ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ. ನಮ್ಮ ಜನರ ಎದುರು ನಾವು ನಮ್ಮ ಅಧಿಕಾರ ತೋರಿಸಲು ಆಗಲ್ಲ. ಬೊಮ್ಮಾಯಿ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ತಪ್ಪಾಗಿರೋದು ಸಚಿವ ಈಶ್ವರಪ್ಪ ಅವರ ಹೇಳಿಕೆಯಿಂದ.
ಬೊಮ್ಮಾಯಿ ಸಿಎಂ ಸ್ಥಾನದಿಂದ ಬದಲಾಗ್ತಾರೆ. ನಿರಾಣಿ ಸಿಎಂ ಆಗ್ತಾರೆ ಅಂತಾ ಈಶ್ವರಪ್ಪ ಹೇಳಿದ್ದಾಗಿಂದ ಗೊಂದಲ ಸೃಷ್ಟಿಯಾಗಿದೆ. ನಿರಾಣಿ ಕೂಡ ನಿನ್ನೆ ಅದೇ ಸ್ಟೇಜ್‌ನಲ್ಲಿ ಬೊಮ್ಮಾಯಿ ಕೇಂದ್ರ ಸಚಿವರಾಗ್ತಾರೆ ಅಂತಾ ಹೇಳಿದ್ದಾರೆ. ಅಧಿಕಾರಿಗಳು ಯಾರು ಸಿಎಂ ಮಾತು ಕೇಳ್ತಿಲ್ಲ. ಸುವರ್ಣ ಸೌಧದ ಕಾರಿಡಾರ್ಗಳಲ್ಲಿ ಸಿಎಂ ಬದಲಾಗ್ತಾರೆ ಅಂತಾ ಸಚಿವರು ಮಾತಾಡಿಕೊಳ್ತಿದ್ದಾರೆ. ಆಡಳಿತ ಕುಸಿತ ಕಂಡಿದೆ. ಬಿಜೆಪಿಯವರು ಎಷ್ಟಾದ್ರು ಸಿಎಂ ಮಾಡಿಕೊಳ್ಳಲಿ. ಯಡಿಯೂರಪ್ಪ ಅವರನ್ನ ಮತ್ತೆ ಬೇಕಾದ್ರೆ ತಂದು ಸಿಎಂ ಸ್ಥಾನದಲ್ಲಿ ಕೂರಿಸಲಿ. ನಮ್ಮದೇನು ಅಭ್ಯಂತರವಿಲ್ಲ ಎಂದರು.