ಬೆಳಗಾವಿ:ಅವರು ಬಟ್ಟೆ ಬಿಚ್ಚಿದ್ದು, ನಾವೆಲ್ಲರೂ ನೋಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟರು. ಫಲಿತಾಂಶದ ಬಳಿಕ ಓಪನ್ ವಾರ ಆಗಲಿ ಎಂದಿದ್ದ ರಮೇಶ್ ಜಾರಕಿಹೊಳಿ ಹೇಳಿಕೆಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಯಾರು ಯಾರನ್ನು ಸೋಲಿಸಿದರು ಎಂಬುದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಬೇಕು.
ರಮೇಶ್ ಜಾರಕಿಹೊಳಿಯನ್ನು ಕರೆದುಕೊಂಡು ಬಿಜೆಪಿ ಸ್ವಯಂಕೃತ ಅಪರಾಧ ಮಾಡಿಕೊಂಡಿದೆ. ಅವರಿಗೆ ಬೇಕಾಗಿತ್ತು ಮಾಡಿಕೊಂಡಿದ್ದಾರೆ, ಒಳ್ಳೆಯದಾಗಲಿ. ನನ್ನ ವಿರುದ್ಧದ ಬಹಿರಂಗ ವಾರ್ ಬಗ್ಗೆ ಅವರನ್ನೇ ಕೇಳಿ. ಅವರು ಬಟ್ಟೆ ಬಿಚ್ಚಿದ್ದು, ಮಾಡಿದ್ದನ್ನು ನಾವೆಲ್ಲರೂ ನೋಡಿದ್ದೇವೆ ಎಂದು ಸಿಡಿ ಪ್ರಕರಣದ ಬಗ್ಗೆ ಟಾಂಗ್ ಕೊಟ್ಟರು.
ಬೆಳಗಾವಿಯಲ್ಲಿ ಡಿಕೆಶಿ ಟಾಂಗ್ ರಾಜ್ಯದಲ್ಲಿ ಪರಿಷತ್ ಚುನಾವಣೆ ಫಲಿತಾಂಶ ವೈಯಕ್ತಿಕವಾಗಿ ಅತೀ ಸಂತೋಷ ಆಗಿಲ್ಲ, ಸಂತೋಷ ಆಗಿದೆ ಅಷ್ಟೇ. ನಮ್ಮ ಪ್ರಕಾರ 13 ರಿಂದ 14 ಸ್ಥಾನ ಗೆಲ್ಲಬೇಕಿತ್ತು. ರಾಜ್ಯದಲ್ಲಿ 11 ಕಡೆ ಕಾಂಗ್ರೆಸ್ ಗೆದ್ದಿದ್ದೇವೆ. ಕಲಬುರಗಿ, ಕೊಡಗು, ಚಿಕ್ಕಮಗಳೂರನಲ್ಲಿ ನಿರೀಕ್ಷೆ ಹುಸಿಯಾಗಿದೆ. ದ್ವಿಸದಸ್ಯ ಸ್ಥಾನಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಮತದಾನ ಆಗಿದೆ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಹಾನಗಲ್ನಲ್ಲಿ ಮತದಾರರು ಬದಲಾವಣೆ ಬಯಸಿದ್ದರು. ಈ ಚುನಾವಣೆಯಲ್ಲಿ ಕೂಡ ಬದಲಾವಣೆ ಬಯಸಿರುವುದು ಕಂಡು ಬಂದಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ನಮಗೆ ಬಿಜೆಪಿ, ದಳ ಪಕ್ಷದಿಂದ ಮತಗಳು ಬಂದಿವೆ. ಸಾಮೂಹಿಕ ನಾಯಕತ್ವದ ಚುನಾವಣೆ ಮಾಡಿ ಯಶಸ್ವಿಯಾಗಿದ್ದೇವೆ. ಹಣಬಲದಿಂದ ಕಾಂಗ್ರೆಸ್, ಬಿಜೆಪಿ ಗೆಲವು ಎಂಬ ಹೆಚ್ಡಿಕೆ ಆರೋಪಕ್ಕೆ, ಏನೋ ಒಂದು ಬಲ ಇದೆಯಲ್ಲ ಬಿಡಿ ಎಂದರು.
(ಇದನ್ನೂ ಓದಿ: ಪರಿಷತ್ ಚುನಾವಣೆ: ಗೆದ್ದ ಅಭ್ಯರ್ಥಿಗಳು ಯಾರ‌್ಯಾರು? ಇಲ್ಲಿದೆ ಫುಲ್ ಡೀಟೇಲ್ಸ್!)