ಬೆಳಗಾವಿ: ನೈಟ್ ಕರ್ಫ್ಯೂ ಜಾರಿ ಮಾಡುವುದರಿಂದ ಪ್ರಯೋಜನ ಆಗಲಿದೆ ಎಂಬ ಯಾವುದೇ ಭರವಸೆಗಳಿಲ್ಲ. ಅವರಿಗೆ ಇಷ್ಟ ಬಂದ ಹಾಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರ ನಡೆಸುವ ಅನುಭವ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಈಗ ವಿರೋಧ ಪಕ್ಷದವರನ್ನು ಕರೆದು ಸಭೆ ಮಾಡುತ್ತೇನೆ ಅಂತಿದ್ದಾರೆ. ಈಗೇಕೆ ಎಲ್ಲಾ ಪಕ್ಷದವರು ಅವರಿಗೆ ಬೇಕು?. ಮಾಡಬಾರದ್ದನ್ನು ಮಾಡಿ ದೇಶ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಭಾರತದ ರಾಜಕೀಯ ಇತಿಹಾಸದಲ್ಲೇ ಕೊರೊನಾ ಸಂದರ್ಭದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ನಡೆದಿದೆ.16 ಸಾವಿರ ಕೋಟಿ ಕೊಟ್ಟಿರುವ ಕುರಿತು ಪಟ್ಟಿ ಬಿಡುಗಡೆ ಮಾಡಲಿ. 20 ಲಕ್ಷ ಕೋಟಿ ಯಾರಿಗೆ ಕೊಟ್ಟರು ಅನ್ನುವುದನ್ನು ಹೇಳಬೇಕು ಎಂದರು.
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಬೆಳಗಾವಿ ಜಿಲ್ಲೆಯಲ್ಲೇ ಈ ರೀತಿ ಆದ್ರೆ ಬೇರೆ ಜಿಲ್ಲೆಗಳ ಪರಿಸ್ಥಿತಿ ಏನು?, ಸಾರಿಗೆ ನೌಕರರನ್ನು ಕರೆದು ಮಾತನಾಡಬೇಕು. ಸಾರಿಗೆ ನೌಕರರನ್ನು ಕುಟುಂಬ ಸದಸ್ಯರ ರೀತಿ ಟ್ರೀಟ್ ಮಾಡಬೇಕು. ಎಲ್ಲಾ ನೌಕರರ ಮೇಲೆ ಸಂಶಯ ಪಡಬಾರದು ಎಂದರು.