ಬೆಳಗಾವಿ : ಮತಾಂತರ ನಿಷೇಧ ಕಾಯ್ದೆ ಮಂಡನೆಯಾದ ಸಂದರ್ಭ ವಿಧೇಯಕದ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿ ಗುಡುಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಚರ್ಚೆಯಲ್ಲಿ ಭಾಗಿಯಾಗದಿರುವುದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.
ವಿಧಾನಸಭೆಯಲ್ಲಿ ನಿನ್ನೆ ಮತಾಂತರ ನಿಷೇಧ ಕಾಯ್ದೆ ಮಂಡನೆಯಾದ ಸಂದರ್ಭ ಕಾಂಗ್ರೆಸ್ ಪಕ್ಷದ ಪರವಾಗಿ ಮಾತು ಆರಂಭಿಸಿದ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಕಡೆಯವರೆಗೂ ಏಕಾಂಗಿ ಹೋರಾಟ ಮಾಡಬೇಕಾಗಿ ಬಂತು. ಒಂದು ಸಂದರ್ಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಸಹಾಯಕ್ಕೆ ಧಾವಿಸಿದರು. ಅದು ಬಿಜೆಪಿ ಸಚಿವರು ಹಾಗೂ ನಾಯಕರ ಅಬ್ಬರದ ನಡುವೆ ಫಲ ಕೊಡಲಿಲ್ಲ. ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ ಹಾಗೂ ಮತ್ತಿತರ ಶಾಸಕರು ಮಾತಿಗೆ ಮುಂದಾದರು. ಆದರೆ, ಬಿಜೆಪಿ ನಾಯಕರ ಪ್ರಬಲ ವಾದವನ್ನು ಎದುರಿಸಲು ಅವರಿಂದಲೂ ಸಾಧ್ಯವಾಗಿಲ್ಲ.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ಅನುಪಸ್ಥಿತಿ ಸಿದ್ದರಾಮಯ್ಯ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿತು. ಬುಧವಾರ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ಸಂದರ್ಭ ವಿಧೇಯಕದ ಪ್ರತಿಯನ್ನು ಹರಿದು ಬಿಸಾಕಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾತ್ರೋರಾತ್ರಿ ಬೆಳಗಾವಿಯಿಂದ ಪ್ರಯಾಣ ಬೆಳೆಸಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.
ಕಲಾಪಕ್ಕೆ ಡಿಕೆ ಶಿವಕುಮಾರ ಗೈರು : ಡಿ ಕೆ ಶಿವಕುಮಾರ್ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ವಿಚಾರ ಅನೇಕ ಕಾಂಗ್ರೆಸ್ ನಾಯಕರಿಗೆ ಗುರುವಾರ ವಿಧಾನಸಭೆಯಲ್ಲಿ ಚರ್ಚೆ ಆರಂಭವಾದ ನಂತರ ತಿಳಿದು ಬಂತು. ಪಕ್ಷದ ಪ್ರಮುಖ ನಾಯಕರಿಗೂ ಸಹ ಮಾಹಿತಿ ನೀಡದೆ ಶಿವಕುಮಾರ್ ತೆರಳಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ವಿಧಾನಸಭೆಯಲ್ಲಿ ಅತ್ಯಂತ ಮಹತ್ವದ ವಿಚಾರ ಚರ್ಚೆಯಾಗುತ್ತಿದ್ದ ಸಂದರ್ಭ, ಯಾವುದೇ ಕಾರಣ ನೀಡದೆ ಡಿಕೆಶಿ ತೆರಳಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಾತ್ರಿ ಕುಶಾಲನಗರಕ್ಕೆ ತೆರಳಿರುವ ಅವರು ಶುಕ್ರವಾರ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಾಂಗ್ರೆಸ್ ನಾಯಕರಲ್ಲಿ ಸಹಜವಾಗಿ ಬೇಸರ ಮೂಡಿಸಿದೆ. ಅತ್ಯಂತ ಮಹತ್ವದ ಚರ್ಚೆ ಸಂದರ್ಭ ಪಕ್ಷದ ನಾಯಕರಿಗೆ ಹೆಗಲುಕೊಟ್ಟು ನಿಲ್ಲುವ ಬದಲು ಬೆಳಗಾವಿಯಿಂದ ತೆರಳಿರುವ ಡಿಕೆಶಿ ನಿಲುವಿಗೆ ಸಾಕಷ್ಟು ಹಿರಿಯ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಸಕಾರಾತ್ಮಕ ಕಾರಣ ನೀಡದೆ ಶಿವಕುಮಾರ್ ಬೆಳಗಾವಿಯಿಂದ ತೆರಳಿದ್ದು ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಬಿಜೆಪಿ ನಾಯಕರನ್ನ ಎದುರಿಸಲು ಕಾಂಗ್ರೆಸ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರದಾಡಿದ ಸನ್ನಿವೇಶ ಗೋಚರಿಸಿದೆ. ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಾಮರಸ್ಯ ಕೊರತೆ ಇದೆ ಎಂಬ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ, ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಪಕ್ಷದ ಇಬ್ಬರು ಹಿರಿಯ ನಾಯಕರಲ್ಲಿ ಇನ್ನಷ್ಟು ಬಿರುಕು ಉಂಟಾಗಿದೆ ಎಂಬ ಅನುಮಾನವನ್ನು ಮೂಡಿಸುತ್ತಿದೆ.
ಮತಾಂತರ ನಿಷೇಧ ಕಾಯ್ದೆ ಚರ್ಚೆ ಸಂದರ್ಭ ಸಿದ್ದರಾಮಯ್ಯ ಏಕಾಂಗಿಯಾಗಿರುವುದು ಹೈಕಮಾಂಡ್ ನಾಯಕರು ಸಹ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಡಿ.ಕೆ. ಶಿವಕುಮಾರ್ ಅವರಿಂದ ವಿವರಣೆ ಕೇಳುವ ಸಾಧ್ಯತೆ ಸಹ ಇದೆ ಎಂಬ ಮಾಹಿತಿ ಕಾಂಗ್ರೆಸ್ ಮೂಲದಿಂದ ಲಭಿಸಿದೆ.