ಬೆಂಗಳೂರು:ವಿಧಾನ ಪರಿಷತ್ ಕಲಾಪದಲ್ಲಿ ಪರ್ಸಂಟೇಜ್ ರಾಜಕಾರಣ ಪ್ರತಿಧ್ವನಿಸಿತು. ಗುತ್ತಿಗೆ ಕಮೀಷನ್ ದಂಧೆ ಕುರಿತು ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಗಿದ್ದು, ಮೂರೂ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದರಿಂದ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ನಲ್ಲಿ ನಿಯಮ 330 ರ ಅಡಿಯಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಕಾಮಗಾರಿಗಳ ಮೊತ್ತದ ಶೇಕಡಾ 40ರಷ್ಟು ಮೊತ್ತ ಲಂಚದ ರೂಪದಲ್ಲಿ ವ್ಯಯವಾಗುತ್ತಿದ್ದು ಭ್ರಷ್ಟಾಚಾರ ತಾಂಡವವಾಡುತ್ತಿರುವ ಕುರಿತು ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ವಿಷಯ ಪ್ರಸ್ತಾಪಿಸಿದರು.
ಶೇ.40 ಪರ್ಸೆಂಟ್ ಕಮೀಷನ್ ಕುರಿತು ಪ್ರಧಾನಿಗಳಿಗೆ ಗುತ್ತಿಗರದಾರರು ಪತ್ರ ಬರೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯಾ? ಇದರಿಂದ ನಮಗೂ ನಿಮಗೂ ಎಲ್ಲರಿಗೂ ಇದರಿಂದ ಅವಮಾನವಾಗಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ನಮಗೇನು ಅವಮಾನವಾಗಿಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ರವಿಕುಮಾರ್, ನಿಮ್ಮವರೇ ಪತ್ರ ಬರೆದಿರಬೇಕು ಎಂದು ಕಾಂಗ್ರೆಸ್ ಕಾಲೆಳೆದರು. ಇದಕ್ಕೆ ಕಿಡಿಕಾರಿದ ಸಿಎಂ ಇಬ್ರಾಹಿಂ, ನಿಮಗೆ ಧೈರ್ಯವಿದ್ದರೆ ಕ್ರಮ ಕೈಗೊಳ್ಳಿ ಎಂದರು. ಇದಕ್ಕೆ ಟಾಂಗ್ ನೀಡಿದ ರವಿಕುಮಾರ್ ಕಾಂಗ್ರೆಸ್ ಸರ್ಕಾರ ಇದ್ದಾಗ ಶೇ. 50 ಪರ್ಸೆಂಟ್ ಅಂತಾ ಪತ್ರ ಬರಿತೀನಿ ಒಪ್ಪಿಕೊಳ್ಳುತ್ತೀರಾ? ಎಂದರು. ಇದಕ್ಕೆ ಕಿಡಿ ಕಾರಿದ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಬಿಜೆಪಿ ವಿರುದ್ಧ ಮುಗಿಬಿದ್ದರು. ಈ ವೇಳೆ, ಆಡಳಿತ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.
ನನ್ ತಲೆ ಕೆಟ್ಟಿದೆ, ಕೆಟ್ ಮಾತು ತರಿಸಬೇಡಿ ಎಂದು ಸಭಾಪತಿ ಗರಂ:ಸದನದಲ್ಲಿ ತೀವ್ರ ಗದ್ದಲವಾಗುತ್ತಿದ್ದಂತೆ ಸಭಾಪತಿ ಪೀಠದಿಂದ ಎದ್ದುನಿಂತ ಸಭಾಪತಿ ಬಸವರಾಜ ಹೊರಟ್ಟಿ, ಅಸಂಸದೀಯ ಪದ ಕಡತದಿಂದ ತೆಗೆದು ಹಾಕುತ್ತೇನೆ, ಅವರಿಗೆ ಅವಕಾಶ ಕೊಟ್ಟಿದ್ದೇನೆ, ಮಾತನಾಡಲು ಬಿಡಿ, ನಂತರ ಸರ್ಕಾರದಿಂದ ಉತ್ತರ ನೀಡಿ, ಈಗ ಗದ್ದಲ ಬೇಡ, ತಲೆ ಕೆಟ್ಟಿದೆ ನಂದು, ನನ್ನ ಬಾಯಲ್ಲಿ ಕೆಟ್ಟ ಮಾತು ತರಿಸಬೇಡಿ ಎಂದು ಸಭಾಪತಿ ಗರಂ ಆದರು.
ನಂತರ ಮಾತು ಮುಂದುವರೆಸಿದ ಸಿಎಂ ಇಬ್ರಾಹಿಂ, ಗುತ್ತಿಗೆದಾರರ ಸಂಘದಿಂದ ದೂರು ನೀಡಲಾಗಿದೆ. ರಾಜ್ಯಪಾಲರಿಗೆ, ಸಿಎಂಗೆ ಕೊಟ್ಟರೂ ಏನೂ ಆಗಿಲ್ಲ, ನಾವು ಮರ್ಯಾದಸ್ಥರು, ನನ್ನ ಜೀವನದಲ್ಲಿ ರೈಡ್ ಆಗಿಲ್ಲ. ರಾಜಕಾರಣಿಗಳಿಗೆ ಶೇ. 10 ಅಧಿಕಾರಿಗಳಿಗೆ ಶೇ.30 ರಷ್ಟು ಕಮೀಷನ್ ಹೋಗುತ್ತಿದೆ. ಇದು ಹಿಂದಿನಿಂದ ನಡೆದುಕೊಂಡು ಬರುತ್ತಿದೆ.
ಬಿಡುಗಡೆಯಾದ ಹಣ ಮುಟ್ಟುವ ವೇಳೆ ಪೋಲಾಗಿರುತ್ತದೆ, ಇದನ್ನೇ ರಾಜೀವ್ ಗಾಂಧಿಯೂ ಹೇಳಿದ್ದರು. ತಪ್ಪು ಮಾಡಿದ ಅಧಿಕಾರಿ ಗೊತ್ತಾಗೋ ವೇಳೆಗೆ ನಿವೃತ್ತಿ ಆಗಿರುತ್ತಾನೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಜಂಟಿ ಸದನ ಸಮಿತಿ ರಚಿಸಿ ಈ ಆರೋಪ ಕುರಿತು ಆಳವಾಗಿ ಚರ್ಚಿಸೋಣ ಎಂದರು.
ಇದನ್ನೆಲ್ಲಾ ಮಾತನಾಡುತ್ತಿದ್ದೇನೆ ಯಾರು ಯಾವಾಗ ಏನು ಮಾಡುತ್ತಾರೋ ಗೊತ್ತಿಲ್ಲ, ಐದು ಲಕ್ಷಕ್ಕೆ ಇಂದು ಸುಪಾರಿ ತಗೊತಾರೆ, ರಕ್ಷಣೆ ಕೇಳಿದರೆ ಸಿಎಸ್ ಸಭೆ ಮಾಡಿ ನಿರ್ಧಾರ ಎನ್ನುತ್ತಿದ್ದಾರೆ. ನನಗೆ ಭದ್ರತೆ ಕೊಡಲಿ ಬಿಡಲು ಆದರೆ ನಾನ್ ಸತ್ತರೆ ಹುಸಿ ಸಂತಾಪ ಮಾಡಬೇಡಿ ಎಂದರು.