ಬೆಳಗಾವಿ:ಧಾರವಾಡ ಮತ್ತು ಬೆಳಗಾವಿ ರೈಲು ಸಂಪರ್ಕ ಯೋಜನೆ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಆದಷ್ಟು ಬೇಗನೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಅನುಮತಿಗಳನ್ನು ನೀಡಿದೆ. ಬೆಳಗಾವಿಯಲ್ಲಿ ಹಲವಾರು ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ತಿಲಕವಾಡಿಯ ಮಿಲೇನಿಯಮ್ ಗಾರ್ಡನ್ ಬಳಿ ಆಯೋಜಿಸಿದ್ದ ಬಿ.ಎಸ್. ಚನ್ನಬಸಪ್ಪ ಟೆಕ್ಸ್ ಟೈಲ್ ಶೋರೂಂ ಉದ್ಘಾಟಿಸಿ ಅವರು ಮಾತನಾಡಿದರು. ಕಿತ್ತೂರು ಕರ್ನಾಟಕ ಭಾಗದಲ್ಲಿ ಬೆಳಗಾವಿ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ. ಈ ಬಾರಿ ಬಜೆಟ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್ ಘೋಷಿಸಲಾಗಿದ್ದು, ನಗರಕ್ಕೆ ರೈಲ್ವೆ ಸಂಪರ್ಕ ವ್ಯವಸ್ಥೆ ಸುಧಾರಿಸಲಾಗುತ್ತಿದೆ. ನೆರೆಯ ಮಹಾರಾಷ್ಟ್ರ ಹಾಗೂ ಗೋವಾದೊಂದಿಗೆ ಬೆಳಗಾವಿ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾದ ಅವಕಾಶಗಳಿವೆ. ಹೀಗಾಗಿ ಕೈಗಾರಿಕಾ ಟೌನ್‌ಶಿಪ್ ಘೋಷಿಸಿದ್ದೇವೆ ಎಂದರು.