ಬೆಳಗಾವಿ:ಎರಡು ದಿನಗಳ ಕಾಲ ನಡೆದ ಸವದತ್ತಿ ಯಲ್ಲಮ್ಮನಗುಡ್ಡದ ರೇಣುಕಾದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಸುಕಿನ ಜಾವ ಮುಕ್ತಾಯಗೊಂಡಿದೆ. 40 ದಿನದಲ್ಲಿ 1.13 ಕೋಟಿ ರೂ. ನಗದು ಸಂಗ್ರಹವಾಗಿದೆ. 22 ಲಕ್ಷ ರೂ. ಮೌಲ್ಯದ ಚಿನ್ನ, 3.86 ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣ ದೇಣಿಗೆ ರೂಪದಲ್ಲಿ ಬಂದಿದೆ.
ದೇವಸ್ಥಾನದ ಹುಂಡಿಯಲ್ಲಿ ಹಣದ ಜೊತೆಗೆ ಭಕ್ತರು ಹಾಕಿದ ಚಿತ್ರ ವಿಚಿತ್ರ ಪತ್ರಗಳು ಪತ್ತೆಯಾಗಿವೆ. ಪತ್ರವನ್ನು ಹುಂಡಿಗೆ ಹಾಕಿದರೆ ದೇವಿ ನಮ್ಮ ಕೋರಿಕೆ ಈಡೇರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ಭಕ್ತರ ವಿಚಿತ್ರ ಕೋರಿಕೆ ಪತ್ರಗಳನ್ನ ಕಂಡು ಹುಂಡಿ ಎಣಿಕೆ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.
ಯಲ್ಲಮನ ಹುಂಡಿಯಲ್ಲಿ ಹಣ, ಪತ್ರ ಪತ್ತೆ ಭಕ್ತನೊಬ್ಬ ಹಲವು ಕೋರಿಕೆಯೊಂದಿಗೆ ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ. ನನಗೆ ಮಾಟ ಮಂತ್ರ ಮಾಡಿಸಿದ ವ್ಯಕ್ತಿಯನ್ನು ಶಿಕ್ಷಿಸಿದರೆ 50,001 ಕಾಣಿಕೆ ನೀಡುತ್ತೇನೆ. ನನ್ನ ವ್ಯವಹಾರಕ್ಕೆ ಮಾಟ ಮಂತ್ರ ಮಾಡಿಸಿದ್ದಾರೆ. ಇದರಿಂದ ಸಾಲಗಾರರ ಕಾಟ ಶುರುವಾಗಿದೆ. ಆನ್ಲೈನ್ ಗೇಮ್ನಲ್ಲಿ ಕಳೆದುಕೊಂಡ ಹಣ ಮರಳಿ ಬರುವಂತೆ ಮಾಡು ತಾಯಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಆನ್ಲೈನ್ ಆಡಲು ಮನಸ್ಸು ಬರದಂತೆ ಮಾಡು ಎಂದೂ ಭಕ್ತ ಮನವಿ ಮಾಡಿಕೊಂಡಿದ್ದಾನೆ.
(ಇದನ್ನೂ ಓದಿ: ದೇವರೇ.. 'ನನ್ನ ಮಗ ರಾತ್ರಿ ಬೇಗ ಮಲಗುವಂತೆ ಮಾಡು'.. ಹುಂಡಿಯಲ್ಲಿ ಭಕ್ತನ ಪತ್ರ)