ಬೆಂಗಳೂರು/ ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಗೆ ಹೆಚ್ಚಿನ ಸಮಯ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಎರಡೂ ಕಡೆಯ ಸದಸ್ಯರ ನಡುವೆ ಗದ್ದಲ ಉಂಟಾದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಮುಗಿದ ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಆರಂಭಿಸುವಂತೆ ಬಿಜೆಪಿಯ ವೀರಣ್ಣ ಚರಂತಿಮಠ್ ಅವರಿಗೆ ಸೂಚಿಸಿದರು. ಈ ಹಂತದಲ್ಲಿ ಎದ್ದು ನಿಂತ ಬಿಜೆಪಿಯ ಹಲವು ಸದಸ್ಯರು ತಮಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಆಗ ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ನಾನು ಮಾತನಾಡಬೇಕಿದೆ. ಹೆಚ್ಚಿನ ಸಮಯ ಕೊಡಿ, ಸದನವನ್ನು ಸಂಜೆವರೆಗೂ ನಡೆಸಿ ಎಂದು ಆಗ್ರಹಿಸಿದರು. ಆಗ ಸ್ಪೀಕರ್, ಅದೆಲ್ಲಾ ಆಗಲ್ಲ. ಮಧ್ಯಾಹ್ನಕ್ಕೆ ಸದನವನ್ನು ಮುಗಿಸಬೇಕಿದೆ ಎಂದರು.
ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ:
ಹಾಗಾದರೆ ಒಂದಿಬ್ಬರು ಸದಸ್ಯರಿಗೆ ಮಾತನಾಡಲು ಅವಕಾಶ ಕೊಡಿ, ನಂತರ ನಾನು ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಆಡಳಿತ ಪಕ್ಷದ ಕೆಲ ಸದಸ್ಯರುಗಳು ನಾವು ಮಾತನಾಡಬೇಕು. ವಿರೋಧ ಪಕ್ಷದ ನಾಯಕರಿಗೆ ಮಾತ್ರ ಅವಕಾಶ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಪ್ರತಿಪಕ್ಷದ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲ ಉಂಟಾಯಿತು.
ಸ್ಪೀಕರ್ ಕಾಗೇರಿ ಅವರು ಗದ್ದಲವನ್ನು ನಿಯಂತ್ರಿಸಿ, ಸರಿ, ಮೂರ್ನಾಲ್ಕು ಸದಸ್ಯರಿಗೆ ಅವಕಾಶ ನೀಡುತ್ತೇನೆ. ನಂತರ ಪ್ರತಿಪಕ್ಷದ ನಾಯಕರು ಮಾತನಾಡುತ್ತಾರೆ ಎಂದು ಹೇಳಿ, ಬಿಜೆಪಿಯ ಚರಂತಿ ಮಠ್ ಅವರಿಗೆ ಮಾತನಾಡಲು ಸೂಚಿಸಿದರು. ಚರಂತಿ ಮಠ್ ಅವರು ಮಾತನಾಡಿ, ಎ.ಎಸ್. ಪಾಟೀಲ್ ನಡಹಳ್ಳಿ ಅವರು ಈ ಚರ್ಚೆಯಲ್ಲಿ ಮಾತನಾಡಿದ ನಂತರ ಸದನದಲ್ಲಿ ಮತ್ತೆ ಕೆಲ ಸದಸ್ಯರುಗಳು ತಮಗೂ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಿದ್ದು, ಗದ್ದಲಕ್ಕೆ ಕಾರಣವಾಯಿತು.