ಕರ್ನಾಟಕ

karnataka

By

Published : Sep 14, 2020, 4:25 PM IST

ETV Bharat / city

ವಾರದಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ ಕೃಷಿ ಸಚಿವ

ರಾಜ್ಯಾದ್ಯಂತ 78 ಲಕ್ಷ ರೈತರು ಈಗಾಗಲೇ ಸ್ವತಃ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಕೆಲವು ಕರಾವಳಿ ಜಿಲ್ಲೆಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಬೆಳೆ ಸಮೀಕ್ಷೆ ಸ್ವಲ್ಪಮಟ್ಟಿಗೆ ಹಿನ್ನಡೆ ಕಂಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​ ಹೇಳಿದರು.

crop-survey-work-and-progress-review-meeting
ಬೆಳೆ ಸಮೀಕ್ಷೆ ಕಾರ್ಯ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಬೆಳಗಾವಿ:ಮುಂದಿನ ಒಂದು ವಾರದಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ನಡೆದ ಬೆಳಗಾವಿ ವಿಭಾಗಮಟ್ಟದ ಬೆಳೆ ಸಮೀಕ್ಷೆ ಕಾರ್ಯ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಆಧಾರಿತವಾಗಿ ರೈತರೇ ಸ್ವಯಂ ನಡೆಸುವ ಬೆಳೆ ಸಮೀಕ್ಷೆ ಕಾರ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಇದುವರೆಗೆ ಅತ್ಯುತ್ತಮ ಸ್ಪಂದನೆ ದೊರೆತಿದೆ. ರಾಜ್ಯಾದ್ಯಂತ 78 ಲಕ್ಷ ರೈತರು ಈಗಾಗಲೇ ಸ್ವತಃ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಕೆಲವು ಕರಾವಳಿ ಜಿಲ್ಲೆಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಬೆಳೆ ಸಮೀಕ್ಷೆ ಸ್ವಲ್ಪಮಟ್ಟಿಗೆ ಹಿನ್ನಡೆ ಕಂಡಿದೆ. ಮುಂಬರುವ ದಿನಗಳಲ್ಲಿ ರೈತರೇ ಸ್ವಯಂ ತಮ್ಮ ಬೆಳೆಗಳ ಸಮೀಕ್ಷೆ ಮಾಡಲಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಬೆಳೆ ವಿಮೆ ಪಾವತಿ ಕಡ್ಡಾಯಗೊಳಿಸಿ:ರೈತರು ಕೇವಲ ಶೇ.2ರಷ್ಟು ಮಾತ್ರ ವಿಮೆ ಹಣ ಪಾವತಿಸಬೇಕು. ‌ಉಳಿದ ಶೇ.98 ಸರ್ಕಾರವೇ ಪಾವತಿಸುವುದರಿಂದ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಬೆಳೆವಿಮೆ ಪಾವತಿಸುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.

ಜಿಲ್ಲಾವಾರು ಮಳೆ, ಬಿತ್ತನೆ, ಗೊಬ್ಬರ ಪೂರೈಕೆ ಹಾಗೂ ಲಭ್ಯತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮಣ್ಣಿನ ಗುಣಮಟ್ಟ ಅರಿತುಕೊಂಡರೆ ಕೃಷಿ ಸಮಸ್ಯೆಗಳನ್ನು ಪರಿಹರಿಸಬಹುದು. ಆದ್ದರಿಂದ ಮಣ್ಣು ಪರೀಕ್ಷೆಗೆ ಆದ್ಯತೆ ನೀಡಬೇಕು ಎಂದು ನಿರ್ದೇಶಿಸಿದರು.

ರೈತರ ಆದಾಯ ದ್ವಿಗುಣಗೊಳಿಸಬೇಕಾದರೆ ರೈತರು ಬಹುಬೆಳೆ ಪದ್ಧತಿಯನ್ನು ಅನುಸರಿಸಲು ಪ್ರೋತ್ಸಾಹಿಸಬೇಕು‌. ಅದೇ ರೀತಿ ರೈತ ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವ ರೂಢಿಸಲು ಅಧಿಕಾರಿಗಳು ಶ್ರಮಿಸಬೇಕು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಮುಂದಿನ ವರ್ಷಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಬೆಳೆ ಸಮೀಕ್ಷೆ ಕಾರ್ಯ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಬೆಳಗಾವಿಯಲ್ಲಿ 1,48,22,566 ಪ್ಲಾಟ್​ಗಳ ಸಮೀಕ್ಷೆ ಆಗಬೇಕಿದ್ದು, 6,00,277 ಪ್ಲಾಟ್​ಗಳ ಸಮೀಕ್ಷೆಯಾಗಿದೆ. ಈವರೆಗೂ ಶೇ.40.49 ರಷ್ಟು ಪ್ರಗತಿಯಾಗಿರುತ್ತದೆ ಎಂದು ಬೆಳಗಾವಿ ಜಿಲ್ಲೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ವಿವರಿಸಿದರು.

ಕೃಷಿ ಜ್ಞಾನ ಆ್ಯಪ್​ ಬಿಡುಗಡೆ:ರೈತರಿಗೆ ಬೇಸಾಯ ಕ್ರಮಗಳು, ಬೆಳೆಗೆ ತಗಲುವ ವಿವಿಧ ರೋಗಗಳ ನಿಯಂತ್ರಣ, ಔಷಧ ಸಿಂಪರಣೆ ಸೇರಿದಂತೆ ವಿವಿಧ ಬಗೆಯ ಧ್ವನಿ ಹಾಗೂ ದೃಶ್ಯ ಆಧಾರಿತ ಮಾಹಿತಿಯನ್ನು ನೀಡುವ ವಿಶೇಷ 'ಕೃಷಿ ಜ್ಞಾನ ಆ್ಯಪ್​​' ಅನ್ನು ಬಿ.ಸಿ.ಪಾಟೀಲ್​​ ಅವರು ಬಿಡುಗಡೆಗೊಳಿಸಿದರು. ರೈತರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಕೃಷಿ ತಜ್ಞರ ಸಲಹೆಗಳನ್ನು ಪಡೆಯಬಹುದು ಎಂದು ಸಚಿವರು ವಿವರಿಸಿದರು.

ABOUT THE AUTHOR

...view details