ಬೆಳಗಾವಿ: ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ರಾಜ್ಯದ 14 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಕಲ್ಪಿಸುವ ಸಂಬಂಧ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸಭೆ ನಡೆಯಿತು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂಬಂಧ ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯು ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕೆಂದು ಸೂಚಿಸಲಾಯಿತು. ಸಮಿತಿಯ ಭಾಗವಾಗಿರುವ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್ ಪ್ರಸಾದ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಕೂಡ ಇದಕ್ಕೆ ಸ್ಪಂದಿಸಿ, ಕಾಲಮಿತಿಯೊಳಗೆ ವರದಿ ಕೊಡುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥ್ನಾರಾಯಣ, ಸಮಿತಿಯ ವರದಿ ಕೈ ಸೇರಿದ ನಂತರ ಅತಿಥಿ ಉಪನ್ಯಾಸಕರ ಸಮಸ್ಯೆ ಮತ್ತು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೂಲಂಕಷವಾಗಿ ಚರ್ಚಿಸಲಾಗುವುದು. ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಈ ವಿಷಯಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಲಾಗಿದೆ ಎನ್ನುವುದನ್ನು ಪರಿಶೀಲಿಸಿ, ರಾಜ್ಯದ ಅತಿಥಿ ಉಪನ್ಯಾಸಕರಿಗೂ ನ್ಯಾಯ ಒದಗಿಸಲಾಗುವುದು. ಅತಿಥಿ ಉಪನ್ಯಾಸಕರಿಗೆ ನೇಮಕಾತಿ ಸಂದರ್ಭದಲ್ಲಿ ಆದ್ಯತೆ ಕೊಡಬೇಕೇ ಅಥವಾ ಇವರಿಗೆ ಒಂದು ಗೌರವಾರ್ಹ ವೇತನವನ್ನು ನಿಗದಿಪಡಿಸಿ ಸೇವೆಯಲ್ಲಿ ಮುಂದುವರಿಸಬೇಕೇ ಎನ್ನುವ ಸಾಧ್ಯತೆಗಳನ್ನು ಕೂಡ ಗಮನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅವರು ಅಭಯ ನೀಡಿದರು.