ಕರ್ನಾಟಕ

karnataka

ETV Bharat / city

ಬಣಗುಡುತ್ತಿದೆ ವಿಧಾನಸಭೆ, ವಿಧಾನ ಪರಿಷತ್ : ಬೆಳಗಾವಿ ಅಧಿವೇಶನಕ್ಕೆ ಸದಸ್ಯರ ನಿರಾಸಕ್ತಿ

ಕೆಲ ಸದಸ್ಯರು ಸುವರ್ಣ ವಿಧಾನಸೌಧದ ಒಳಭಾಗದಲ್ಲಿ ಓಡಾಡುವುದು ಕಾಣಸಿಗುತ್ತಿದೆ. ಆದರೆ ಕಲಾಪಕ್ಕೆ ಹಾಜರಾಗುತ್ತಿರುವ ಕಾಣಿಸುತ್ತಿಲ್ಲ. ಬೆಳಗಾವಿ ಅಧಿವೇಶನಕ್ಕೆ ಸಚಿವರು, ಶಾಸಕರು ನಿರಾಸಕ್ತಿ ಎದ್ದು ಕಂಡಿದೆ. ಮೊದಲ ದಿನವೇ ಬೆಳರಣಿಕೆಯಷ್ಟು ಶಾಸಕರಷ್ಟೇ ಭಾಗಿಯಾಗಿದ್ದಾರೆ. ಬಹುತೇಕ ಪ್ರತಿಪಕ್ಷದ ಸದಸ್ಯರು ಗೈರಾಗಿದ್ದಾರೆ.

belgaum-session
ಬೆಳಗಾವಿ ಅಧಿವೇಶನ

By

Published : Dec 13, 2021, 1:18 PM IST

ಬೆಳಗಾವಿ : ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸದಸ್ಯರ ಗೈರು ಎದ್ದು ಕಾಣುತ್ತಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಕಲಾಪ ಆರಂಭವಾದ ಎರಡು ಗಂಟೆಯ ನಂತರವೂ ಅಷ್ಟಾಗಿ ಕಾಣುತ್ತಿಲ್ಲ. ಮೊದಲ ದಿನದ ಅಧಿವೇಶನದಲ್ಲಿಯೇ ಸದಸ್ಯರ ಗೈರುಹಾಜರಿ ಕೋಟ್ಯಂತರ ರೂ. ವೆಚ್ಚಮಾಡಿ ನಡೆಸುತ್ತಿರುವ ಅಧಿವೇಶನವನ್ನೇ ಅಪಹಾಸ್ಯ ಮಾಡುವಂತೆ ತೋರುತ್ತಿದೆ.

ಒಮಿಕ್ರಾನ್ ಆತಂಕದ ಜೊತೆ ವಿವಿಧ ಕಾರಣಕ್ಕೆ ಉಭಯ ಸದನದ ಸದಸ್ಯರು ಕಲಾಪದತ್ತ ಸುಳಿಯುತ್ತಿಲ್ಲ. ಎರಡು ವರ್ಷಗಳ ನಂತರ ನಡೆಯುತ್ತಿರುವ ಅಧಿವೇಶನಕ್ಕೆ ಸದಸ್ಯರ ಗೈರು ಹಾಜರಿ ಸಾಕಷ್ಟು ಬೇಸರ ಮೂಡಿಸುವಂತಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆದ ಸಂದರ್ಭದಲ್ಲಿ ಎಲ್ಲ ಸದಸ್ಯರ ಗೈರುಹಾಜರಿ ಸಾಮಾನ್ಯ. ಆದರೆ ಸಾಕಷ್ಟು ಒತ್ತಡಗಳು ಹಾಗೂ ನಿರೀಕ್ಷೆಯ ನಂತರ ಆರಂಭವಾಗಿರುವ ಅಧಿವೇಶನಕ್ಕೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊದಲನೇ ದಿನವೇ ತೀವ್ರ ನಿರಾಸೆ ಉಂಟಾಗಿದೆ.

ವಿಧಾನಸಭೆಗೆ ಸದಸ್ಯರ ಗೈರು : ಬೆಳಗಾವಿ ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ 80 ಶಾಸಕರು ಹಾಜರಾಗಿದ್ದಾರೆ. ಪ್ರತಿಪಕ್ಷದ 35 ಸದಸ್ಯರು, ಆಡಳಿತ ಪಕ್ಷದ 45 ಸದಸ್ಯರು‌ ಭಾಗಿಯಾಗಿದ್ದಾರೆ. ಕಾಂಗ್ರೆಸ್​ 22 ಹಾಗೂ ಜೆಡಿಎಸ್ ನ 13 ಶಾಸಕರು ಕಲಾಪದಲ್ಲಿ ಇದ್ದಾರೆ. ಪ್ರತಿಪಕ್ಷ ಜೆಡಿಎಸ್ ನ ನಾಯಕರಾಗಿರುವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ದೂರ ಉಳಿದಿರುವುದು ಅಚ್ಚರಿ ಮೂಡಿಸಿದೆ.

ವಿಧಾನಪರಿಷತ್ ಸದಸ್ಯರ ಗೈರು : ಇತ್ತ ಪರಿಷತ್​​ ಪರಿಸ್ಥಿತಿಯು ಭಿನ್ನವಾಗಿ ಇಲ್ಲ. ಆಡಳಿತ ಪಕ್ಷದ ಗ್ಯಾಲರಿಯಲ್ಲಿ ಒಂದಿಷ್ಟು ಸಚಿವರು ಸೇರಿದಂತೆ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಉಪಸ್ಥಿತರಿದ್ದಾರೆ. ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದು, ಬಿಜೆಪಿಯ ಬಹುತೇಕ ಸದಸ್ಯರು ಉಪಸ್ಥಿತರಾಗಿದ್ದಾರೆ. ಆಡಳಿತ ಪಕ್ಷದ 10-12 ಸದಸ್ಯರು ಕಾಣಸಿಕ್ಕರೆ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷ ಸೇರಿದರು 10 ತಲುಪುವಷ್ಟು ಸದಸ್ಯರು ಕಾಣುತ್ತಿಲ್ಲ.

ಕಾಂಗ್ರೆಸ್​ನ ಮೊದಲ ಸಾಲಿನ ಸದಸ್ಯರಲ್ಲಿ ಪ್ರತಿಪಕ್ಷನಾಯಕ ಎಸ್. ಆರ್. ಪಾಟೀಲ್ ಹಾಗೂ ಮಾಜಿ ಸಭಾಪತಿ ಶೆಟ್ಟಿ ಉಪಸ್ಥಿತರಿದ್ದಾರೆ. ಉಳಿದ ಸದಸ್ಯರು ಕಾಣಿಸುತ್ತಿಲ್ಲ. ಕೆಲ ಸದಸ್ಯರು ಸುವರ್ಣ ವಿಧಾನಸೌಧದ ಒಳಭಾಗದಲ್ಲಿ ಓಡಾಡುವುದು ಕಾಣಸಿಗುತ್ತಿದೆ. ಆದರೆ ಕಲಾಪಕ್ಕೆ ಹಾಜರಾಗುತ್ತಿಲ್ಲ. ಬೆಳಗಾವಿ ಅಧಿವೇಶನಕ್ಕೆ ಸಚಿವರು, ಶಾಸಕರು ನಿರಾಸಕ್ತಿ ಎದ್ದು ಕಂಡಿದೆ. ಮೊದಲ ದಿನವೇ ಬೆಳರಣಿಕೆಯಷ್ಟು ಶಾಸಕರಷ್ಟೇ ಭಾಗಿಯಾಗಿದ್ದಾರೆ. ಬಹುತೇಕ ಪ್ರತಿಪಕ್ಷದ ಸದಸ್ಯರು ಸಹ ಗೈರುಹಾಜರಾಗಿದ್ದಾರೆ.

ABOUT THE AUTHOR

...view details