ಬೆಳಗಾವಿ: ವಿವಾದಾತ್ಮಕ ಟ್ವೀಟ್ ಮೂಲಕ ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ಮಧ್ಯೆಯೇ ಟ್ವಿಟರ್‌ನಲ್ಲಿ ಸಂಜಯ್ ರಾವತ್ ಬೆಳಗಾವಿ ಫೈಲ್ಸ್ ಎಂದು ಪೋಸ್ಟ್ ಮಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಫೈಲ್ಸ್ ಎಂದು ವ್ಯಂಗ್ಯದ ಚಿತ್ರವನ್ನು ರಾವತ್ ಪೋಸ್ಟ್ ಮಾಡಿದ್ದಾರೆ. ಬೆಳಗಾವಿ ಫೈಲ್ಸ್ ಏನು ಕಡಿಮೆ ಇದೆಯಾ? ಪ್ರಜಾಪ್ರಭುತ್ವದ ಹತ್ಯೆ ಎಂಬ ಬರಹ ಇರುವ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮೂಲಕ ಬೆಳಗಾವಿಯಲ್ಲಿರುವ ಮರಾಠಿಗರ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಬಿಂಬಿಸುವ ಯತ್ನವನ್ನು ರಾವತ್ ಮಾಡಿದ್ದಾರೆ. ಪರಿಣಾಮ ರಾವತ್ ವಿರುದ್ಧ ಬೆಳಗಾವಿಯಲ್ಲಿ ಆಕ್ರೋಶ ಭುಗಿಲೆದ್ದಿದೆ.
ಇದನ್ನೂ ಓದಿ:ವಿಜಯನಗರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಬಾಲಕೃಷ್ಣ ಅಮಾನತು
ಭಾರತದ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಿ ಎನ್ನುವವರನ್ನು ಉಗ್ರರು ಎನ್ನುತ್ತೇವೆ, ಹಾಗಾದರೆ ಕರ್ನಾಟಕದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎನ್ನುವವರನ್ನು ಏನೆನ್ನಬೇಕು ಹೇಳು? ಎಂದು ಸಂಜಯ್ ರಾವತ್‌ಗೆ ಪ್ರಶ್ನಿಸಿದ್ದಾರೆ. ಟ್ರೋಲ್, ಕಮೆಂಟ್ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾವತ್ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
ಮಹಾರಾಷ್ಟ್ರದ ಶಿವಸೇನೆಯು ಗಡಿ ವಿವಾದವನ್ನು ಜೀವಂತ ಇಡಲು ಯತ್ನಿಸುತ್ತಿದೆ. ಬೆಳಗಾವಿಯಲ್ಲಿ ಕನ್ನಡಿಗರು ಮರಾಠಿಗರು ಒಗ್ಗಟ್ಟಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಬೇಕಿದ್ರೆ ಸಂಜಯ್ ರಾವತ್ ಶಿವಸೇನೆ ಫೈಲ್ಸ್ ನೋಡಲಿ ಎಂದು ಕನ್ನಡ ಹೋರಾಟಗಾರರು ತಿರುಗೇಟು ನೀಡಿದ್ದಾರೆ.