ಬೆಳಗಾವಿ/ಉಡುಪಿ:ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ವಾಟ್ಸಪ್ನಲ್ಲಿ ಡೆತ್ ನೋಟ್ ಕಳಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿಯ ಲಾಡ್ಜ್ನಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಉಡುಪಿ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ತಾಲೂಕಿನ ಬಡಸ್ ಗ್ರಾಮದ ಸಂತೋಷ್ ಪಾಟೀಲ್ ಸದ್ಯ ವಿಜಯ ನಗರದಲ್ಲಿ ವಾಸವಾಗಿದ್ದರು. ಬಿಜೆಪಿ ಸದಸ್ಯರೂ ಆಗಿರುವ ಇವರು ಕೆ.ಎಸ್. ಈಶ್ವರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಸಂತೋಷ ಅವರು ಹಿಂಡಲಗಾ ಗ್ರಾಮದಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ 108 ಕಾಮಗಾರಿ ನೆರವೇರಿಸಿದ್ದರು. ಇದರ ಬಿಲ್ ಪಡೆಯಲು ಈಶ್ವರಪ್ಪ ಶೇ.40 ಕಮಿಷನ್ ಕೇಳುತ್ತಿರುವ ಬಗ್ಗೆ ಸಂತೋಷ ಆರೋಪ ಮಾಡಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಬಗ್ಗೆ ದೂರು ಸಲ್ಲಿಸಿದ್ದರು. ಬಳಿಕ ಈಶ್ವರಪ್ಪ ಅವರು ಸಂತೋಷ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡಿದ್ದರು.