ಅಥಣಿ: ಅಥಣಿ ಭಾಗದ ಅನೇಕ ಜನ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕೇಳುತ್ತಿದ್ದಾರೆ. ಅಥಣಿ-ಕಾಗವಾಡ ಮಧ್ಯೆ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿ ಕೊಡುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ಅಥಣಿ ಪಟ್ಟಣದಲ್ಲಿ ಅಬ್ದುಲ್ ಬಾರಿ ಮುಲ್ಲಾ ಪರಿವಾರದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಸ್ಯೆಗಳನ್ನು ಹೊತ್ತುಕೊಂಡು ಕಷ್ಟವಿದೆ ಎಂದು ನನ್ನೆಡೆಗೆ ಬರುವ ಪ್ರತಿಯೊಬ್ಬರು ನನ್ನ ಪಾಲಿನ ದೇವರು ಎಂದು ಭಾವಿಸುತ್ತೇನೆಂದರು. ಅಥಣಿಗೆ ನನಗೆ ಅವಿನಾಭಾವ ಸಂಬಂಧವಿದೆ, ನಾನು ಯಾವತ್ತೂ ಅಥಣಿ ಪೇಟೆಯ ಒಡನಾಟದಲ್ಲಿ ಇದ್ದವನು. ಹಲವಾರು ವರ್ಷಗಳವರೆಗೆ ಸಂಪರ್ಕದಲ್ಲಿದ್ದುದರಿಂದ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ನನ್ನ ಮೇಲಿದೆ. ಇಂದು ತಾವೆಲ್ಲಾ ಆಗಮಿಸಿ, ನನಗೆ ಪ್ರೀತಿ ಪೂರ್ವಕ ಸನ್ಮಾನ ನೀಡಿದ್ದು ಸಂತಸ ತಂದಿದೆ. ಮುಂದಿನ ದಿನಮಾನದಲ್ಲಿ ಕೂಡ ತಮ್ಮ ಪ್ರೀತಿ, ವಿಶ್ವಾಸ ಯಾವತ್ತೂ ಇರಲಿ ಎಂದರು.