ಬೆಳಗಾವಿ :ಬಹುತೇಕ ನಾಯಕರು ಮತ ರಾಜಕಾರಣದಲ್ಲೇ ನಿರತರಾಗಿರುವಾಗ ಈ ಸಂದರ್ಭದಲ್ಲಿ ಸೈದ್ಧಾಂತಿಕ ರಾಜಕಾರಣದ ಮೂಲಕ ವಿಶೇಷ ಛಾಪು ಮೂಡಿಸಿದವರು ಶಾಸಕ ಸತೀಶ್ ಜಾರಕಿಹೊಳಿ.
ಅವರು ರಾಜಕೀಯ ಅಖಾಡಕ್ಕೆ ಕಾಲಿಟ್ಟಿದ್ದು ಜನತಾ ಪಕ್ಷಕ್ಕೆ ಸೇರುವ ಮೂಲಕ. ನಂತರ ಕಾಂಗ್ರೆಸ್ನತ್ತ ಮುಖ ಮಾಡಿದರು. ಈಗ ಆ ಪಕ್ಷದ ಹಿರಿಯ ನಾಯಕ. ಅವರು ರಾಜಕೀಯ ಪ್ರವೇಶಕ್ಕೂ ಮುನ್ನವೇ ಮೌಢ್ಯದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಮನೆ ಮಾತಾಗಿದ್ದರು.
ಮೂರು ದಶಕಗಳಲ್ಲಿ ತಮ್ಮ ಪಕ್ಷದ ಇತರ ನಾಯಕರ ನಿಲುವು ಬದಲಾದ್ರೂ ತಾನು ಮಾತ್ರ ಮೂಢನಂಬಿಕೆ, ಅಂಧಶೃದ್ಧೆ ಹಾಗೂ ವಾಮಾಚಾರಗಳಂಥ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡರು.
ಮೂಢನಂಬಿಕೆಗಳ ವಿರುದ್ಧ ಕೆಲವರು ಆವೇಶ ಭರಿತ ಭಾಷಣ ಮಾಡಿದ್ದು ಬಿಟ್ಟರೆ ನೈಜ ಹೋರಾಟಕ್ಕೆ ಇಳಿದಿರಲಿಲ್ಲ. ಆದರೆ, ಸತೀಶ್ ಜಾರಕಿಹೊಳಿ ಹಾಗಲ್ಲ. ನೈಜ ಹೋರಾಟದ ಜೊತೆಗೆ ತಮ್ಮ ಮಾತು-ಕೃತಿ, ಸಂಘಟನೆ ಮೂಲಕ ವಿಭಿನ್ನ ಪ್ರತಿರೋಧದ ಹೊಸ ಮಾದರಿ ರೂಪಿಸಿದರು.
ತನ್ನ ವಿರುದ್ಧ ಎಷ್ಟೇ ವಿರೋಧ ವ್ಯಕ್ತವಾದ್ರೂ ತಾವು ನಂಬಿದ ಸಿದ್ಧಾಂತವನ್ನು ಬಹಿರಂಗವಾಗಿ ಹೇಳುವ ಮೂಲಕ ನೇರ ನುಡಿಗೆ ಹೆಸರಾದವರು. ಮತ್ತೊಬ್ಬರನ್ನು ಪ್ರೇರೇಪಿಸುವ ರಾಜಕಾರಣಿಯೂ ಹೌದು. ಬುದ್ಧ, ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿರುವ ಅವರು, ಮೌಢ್ಯದ ವಿರುದ್ಧ ಜಾಗೃತಿ ಹಾಗೂ ಸಮಾಜ ಸೇವೆಗಾಗಿ ಪ್ರತಿ ವರ್ಷ ₹5 ಕೋಟಿ ಮೀಸಲಿಡುತ್ತಾರೆ. 'ಮೂಢನಂಬಿಕೆಗಳಿಂದ ಸಮಾಜ ಬದಲಾದ್ರೆ ನನ್ನ ಕೆಲಸ ಹಾಗೂ ಹಣ ವೆಚ್ಚ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ' ಎಂದು ಸತೀಶ್ ಜಾರಕಿಹೊಳಿ ಈಟಿವಿ ಭಾರತಕ್ಕೆ ಹೇಳಿದರು.
ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಗೆದ್ದ ಸತೀಶ್!
ರಾಹುಕಾಲ ಅಂದರೆ ಸಾಕು ಕೆಲವರು ಯಾವ ಕೆಲಸಕ್ಕೂ ಮುಂದಾಗುವುದಿಲ್ಲ. ಆದರೆ, ಸತೀಶ್ ಅದಕ್ಕೆ ತದ್ವಿರುದ್ಧ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದ ಸತೀಶ್ ಜಾರಕಿಹೊಳಿ ಎಲ್ಲರ ಗಮನ ಸೆಳೆದಿದ್ದರು. ಎಷ್ಟೋ ಮಂದಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಸೋಲು ಖಚಿತ ಎಂಬ ಮಾತುಗಳನ್ನಾಡಿದ್ದರು. ಸರಿಯಾಗಿ ಒಂದೂ ದಿನವೂ ಪ್ರಚಾರ ಕೈಗೊಂಡಿರಲಿಲ್ಲ. ಕ್ಷೇತ್ರದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿರಲಿಲ್ಲ. ಆದರೆ, ಶುಭ ಘಳಿಗೆ ಎಂಬ ಭಾವನೆಗಳಿಂದ ದೂರವಿದ್ದ ಅವರು, ಚುನಾವಣೆಯಲ್ಲಿ ಗೆದ್ದು ದಾಖಲೆ ಬರೆಯುವ ಮೂಲಕ ಸೋಲುತ್ತಾರೆ ಎಂದಿದ್ದವರ ಬಾಯಿ ಮುಚ್ಚಿಸಿದರು. ತಾನು ಮೂಢನಂಬಿಕೆಗಳಿಂದ ದೂರ ಎಂಬುದನ್ನು ತೋರಿಸಿಕೊಟ್ಟರು.