ಬೆಳಗಾವಿ:ನಕಲಿ ದಾಖಲೆ ಸೃಷ್ಟಿಸಿ ಜಮೀನು ವರ್ಗಾವಣೆ ಮಾಡಿರುವ ಅಕ್ರಮ ಆರೋಪ ಎದುರಿಸುತ್ತಿರುವ ಸಚಿವ ಭೈರತಿ ಬಸವರಾಜ್ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಸಂಬಂಧ ಇಂದು ವಿಧಾನಸಭೆಯಲ್ಲಿ ನಿಲುವಳಿ ಮಂಡನೆ ಮಾಡಲಿದ್ದು, ಈಗಾಗಲೇ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ಮಾಹಿತಿ ನೀಡಿದೆ.
ನಿಲುವಳಿ ಸೂಚನೆ ಮಂಡನೆ ತಯಾರಿ ಹಿನ್ನಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿರುವ ಸಚಿವ ಡಾ ಕೆ ಸುಧಾಕರ್ ನಿಲುವಳಿ ಸೂಚನೆ ಮಂಡನೆ ಮಾಡದಂತೆ ಮನವಿ ಮಾಡಿದ್ದಾರೆಂಬ ಮಾಹಿತಿ ಇದೆ. ಪರೋಕ್ಷವಾಗಿ ಸರ್ಕಾರದ ಪರವಾಗಿ ಮನವಿ ಮಾಡಿರುವ ಸುಧಾಕರ್ ಸರ್ಕಾರದ ಪರವಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಈ ಮನವಿಯನ್ನು ಒಪ್ಪದ ಸಿದ್ದರಾಮಯ್ಯ ನಮ್ಮ ಹೋರಾಟ ನಡೆಯಲಿದೆ. ನೀವು ಸಮಜಾಯಿಷಿ ನೀಡಲು ಸಿದ್ಧತೆ ಮಾಡಿಕೊಳ್ಳಿ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ಸಚಿವ ಬೈರತಿ ಬಸವರಾಜ್ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಜಾಮೀನು ವರ್ಗಾವಣೆ ಮಾಡಿದ ಪ್ರಕರಣದ ನಿಲುವಳಿ ಸೂಚನೆ ನೀಡಿದ್ದಾರೆ. ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿಗೆ ಪತ್ರ ನೀಡಿರುವ ಕಾಂಗ್ರೆಸ್ ನಾಯಕರು ಇಂದು ಈ ವಿಚಾರ ಚರ್ಚೆಗೆ ಬರುವಂತೆ ಸಭಾಧ್ಯಕ್ಷರ ಗಮನ ಸೆಳೆಯುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿರಿ:ಪ್ರತಿಭಟನೆ ಕೈ ಬಿಟ್ಟರೂ ಕೇಂದ್ರವನ್ನು ಬಿಡದ ರಾಕೇಶ್ ಟಿಕಾಯತ್: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಮುಖಂಡ
ಈ ಪ್ರಕರಣ ನಿನ್ನೆ ವಿಧಾನಪರಿಷತ್ನಲ್ಲಿ ದೊಡ್ಡಮಟ್ಟದ ಗದ್ದಲಕ್ಕೆ ಕಾರಣವಾಗಿತ್ತು. ಇದೀಗ ಇಂದು ವಿಧಾನಸಭೆಯಲ್ಲಿ ಸದ್ದು ಮಾಡಲಿದೆ. ವಿಧಾನಸಭೆಯಲ್ಲೂ ವಿಷಯವನ್ನು ಪ್ರಸ್ತಾಪ ಮಾಡಿ ಸಚಿವ ಸ್ಥಾನಕ್ಕೆ ಬೈರತಿ ಬಸವರಾಜ್ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಲು ಕಾಂಗ್ರೆಸ್ ಮುಂದಾಗಿದೆ. ರಮೇಶ್ ಜಾರಕಿಹೊಳಿ ವಿರುದ್ದದ ಕೇಸ್ ವಿಚಾರದ ತನಿಖೆ ಪ್ರಗತಿ ಬಗ್ಗೆ ಮಾಹಿತಿ ಕೇಳಲು ಕಾಂಗ್ರೆಸ್ ತೀರ್ಮಾನಿಸಿದೆ. ಸದನದಲ್ಲಿ ಕೇಸ್ ತನಿಖಾ ಪ್ರಗತಿ ಹಾಗೂ ವಿಚಾರಣೆ ವಿಚರಗಳನ್ನ ಕೇಳಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಗಮನ ಸೆಳಯುವ ಸೂಚನೆ ನೀಡಲಿರುವ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಮಹಿಳಾ ಶಾಸಕರಿಂದ ಗಮನ ಸೆಳೆಯುವ ಸೂಚನೆ ಪ್ರಸ್ತಾಪ ಸಾಧ್ಯತೆ ಇದೆ.