ಬೆಂಗಳೂರು : ರಾಜ್ಯದ ಸಚಿವ ಮತ್ತು ಶಾಸಕರೊಬ್ಬರು ಬೆಂಗಳೂರಿನಲ್ಲಿ ಬಹುಕೋಟಿ ಮೌಲ್ಯದ ಭೂಕಬಳಿಕೆ ಮಾಡಿರುವ ಪ್ರಕರಣದ ತನಿಖೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಸದಸ್ಯರು ನಡೆಸುತ್ತಿರುವ ಧರಣಿ ವಿಷಯದ ಕುರಿತು ಸಭಾಪತಿ ಕಚೇರಿಯಲ್ಲಿ ನಡೆದ ಸಭೆಯ ನಿರ್ಧಾರಕ್ಕೆ ಬದ್ದವಾಗುವಂತೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿ ಗದ್ದಲಕ್ಕೆ ತೆರೆ ಎಳೆದರು.
ಬೆಳಗಿನ ಕಲಾಪ ಮಧ್ಯಾಹ್ನ 1.20 ಕ್ಕೆ ಆರಂಭಗೊಂಡಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ಚಾಮಿ, ಸರ್ಕಾರದ ವಿರುದ್ಧ ಮಾಡುವ ಟೀಕೆಯನ್ನು ನಾವು ಸ್ವಾಗತಿಸಿದ್ದೇವೆ, ಆದರೆ, ಪೀಠದ ತೀರ್ಮಾನಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲ, ನಾವೆಲ್ಲಾ ಶಾಶ್ವತವಲ್ಲ, ಪರಿಷತ್ ಶಾಶ್ವತ, ಪೀಠವನ್ನೇ ಪ್ರಶ್ನೆ ಮಾಡಿದರೆ ಹೇಗೆ? ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರವನ್ನೇ ಪ್ರಶ್ನಿಸಿದಂತಾಗಲಿದೆ.
ಸಭಾಪತಿಗಳು ಕೂಡ ಮುಖ್ಯ ನ್ಯಾಯಮೂರ್ತಿ ಇದ್ದ ಹಾಗೆ, ನಿಮ್ಮ ತೀರ್ಮಾನ ಪ್ರಶ್ನಿಸಿದ್ದಾರೆ, ಹಾಗಾಗಿ ನಾವು ಕಾಂಗ್ರೆಸ್ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ನಾವು ನಿನ್ನೆ ಸದಸ್ಯರ ಅಮಾನತು ಘಟನೆಗೆ ವಿಷಾಧಿಸಲಿದ್ದೇವೆ, ನಾನು ಕ್ರಮಕ್ಕೆ ಒತ್ತಡ ಹೇರಬಾರದಿತ್ತು, ಅದಕ್ಕೆ ವಿಷಾಧವಿದೆ ಅದನ್ನು ಒಪ್ಪಿಕೊಳ್ಳುತ್ತೇವೆ. ಈಗ ಸಭೆ ನಡೆಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಪೊಲೀಸರ ಮೇಲೆ ಕ್ರಮಕೈಗೊಳ್ಳಿ: ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್‌ಪಾಟೀಲ್, ಬೆಳಗ್ಗೆಯಿಂದ ಇಲ್ಲಿಯವರೆಗೂ ನಮಗೆ ಸುವರ್ಣಸೌಧದ ಒಳಗೆ ಬರಲು ಪೊಲೀಸರು ಒಳಬಿಡಲಿಲ್ಲ, ಗೇಟ್ ಬಳಿಯೇ ತಡೆದರು, ಟ್ರ್ಯಾಕ್ಟರ್ ಗೆ ಪರವಾನಗಿ ಕೇಳಿದರು, ನಾವು ಟ್ರ್ಯಾಕ್ಟರ್, ಚಕ್ಕಡಿಯಲ್ಲಿ ಬರಬಹುದು ಎಂದರೂ ಕೇಳಲಿಲ್ಲ, ನಾನು ಸಭಾಪತಿ ಸುಪರ್ದಿಯಲ್ಲಿದ್ದೇವೆ ಸಿಎಂ ಸುಪರ್ದಿಯಲ್ಲಿ ಇಲ್ಲ, ಪೊಲೀಸರು ನಮ್ಮನ್ನು ಮುಟ್ಟಲು ಸಭಾಪತಿ ಅನುಮತಿ ಕೊಡಬೇಕು, ನಾವು ಸದನಕ್ಕೆ ಹೇಗೆ ಬರಬೇಕು ಎಂದು ವ್ಯವಸ್ಥೆ ಮಾಡುವ ಕೆಲಸ ಸಿಎಂ ದಲ್ಲ, ಸಭಾಪತಿಗಳದ್ದು, ನಮಗೆ ಸದನಕ್ಕೆ ಬರುವಂತೆ ವ್ಯವಸ್ಥೆ ಮಾಡುವುದು ಸಭಾಪತಿಗಳ ಕೆಲಸ.
ನಮ್ಮನ್ನು ಪೊಲೀಸರು ತಡೆದಿದ್ದಾರೆ, ಸದನಕ್ಕೆ ಬರಲು ಬಿಡಲಿಲ್ಲ ಹಾಗಾಗಿ ಇದು ಸಭಾಪತಿಗಳ ಹಕ್ಕಿನ ಚ್ಯುತಿಯಲ್ಲವೆ? ಪೊಲಿಸರ ವಿರುದ್ಧ ಹಕ್ಕುಚ್ಯುತಿ ಕುರಿತು ಮುಂದೆ ನಿರ್ಧರಿಸುತ್ತೇವೆ, ಇವತ್ತಿನ ಕಲಾಪ ಮೂರು ಗಂಟೆ ಹಾಳಾಯಿತು. ಇದಕ್ಕೆ ಪೊಲೀಸರೇ ಕಾರಣ, ನಮ್ಮನ್ನು ಪೊಲೀಸ್ ಜೀಪ್ ನಲ್ಲಿ ಹೋಗಿ ಅಂದರು ನಾವೇನು ಆರೋಪಿಗಳಾ? ಸದಸ್ಯರನ್ನು ತಡೆದು ನಿಲ್ಲಿಸವ ಧೈರ್ಯ ತೋರಿದ್ದಾರೆ, ಇದನ್ನು ನೀವು ಪ್ರಶ್ನಿಸಬೇಕು.
ಕಾನೂನು ಸುವ್ಯವಸ್ಥೆ ಎಡಿಜಿಪಿಗೆ ಶಿಕ್ಷೆಯಾಗಬೇಕು, ನಮ್ಮನ್ನು ತಡೆದರೆ ಸಭಾಪತಿಗೆ ಅವಮಾನ ಮಾಡಿದಂತೆ ಎಂದು ನಾನು ಪೊಲೀಸರಿಗೆ ಹೇಳಿದರೂ ಕೇಳಲಿಲ್ಲ ಹಾಗಾಗಿ ಉದ್ದಟತನದ ಅಧಿಕಾರಗಳ ವಿರುದ್ಧ ಕ್ರಮ ಆಗಬೇಕು, ನೀವು ನಿಮ್ಮ ಅಧಿಕಾರ ಚಲಾಯಿಸಿ ಎಂದು ಸಭಾಪತಿಗಳನ್ನು ಒತ್ತಾಯಿಸಿದರು.
ಯಾರನ್ನೂ ಅವಮಾನಿಸುವ ಉದ್ಧೇಶವಿಲ್ಲ : ಪ್ರತಿಪಕ್ಷ ನಾಯಕರ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ಸದನ ನಡೆಸಲು ಭದ್ರತೆ, ಕಾನೂನು ಸುವ್ಯವಸ್ಥೆ ಅಗತ್ಯ, ನಿಮ್ಮನ್ನು ತಡೆದಿದ್ದು ನಮಗೆ ಗೊತ್ತಿಲ್ಲ, ಗೊತ್ತಾದ ತಕ್ಷಣ ನಾವು ಸ್ಪಂದಿಸಿದೆವು, ನಿಮಗೆ ಆಗಿರುವ ಅವಮಾನವನ್ನು ನಾವು ಒಪ್ಪಲ್ಪ, ಸಿಎಂ ಕೂಡ ಶಾಸಕರು ಟ್ರ್ಯಾಕ್ಟರ್ನಲ್ಲಿ ಬರಲು ಒಪ್ಪಿಗೆ ನೀಡಿದ್ದರು, ಎಲ್ಲೋ ಗೊಂದಲವಾಗಿದೆ.