ಬೆಳಗಾವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಬೆಳಗಾವಿ ನಗರದ ಸುವರ್ಣ ವಿಧಾನಸೌಧದಲ್ಲಿ ಸಭೆ ನಡೆಯಿತು, ವಿಧಾನಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಾದ ಶರಣಗೌಡ ಬಯ್ಯಾಪುರ, ಸುನಿಲ್ ಗೌಡ ಪಾಟೀಲ್ ಹಾಗೂ ಭೀಮನಗೌಡ ಪಾಟೀಲ್ ಅವರನ್ನ ಅಭಿನಂದಿಸಲಾಯಿತು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಮಾಜಿ ಡಿಸಿಎಂ ಜಿ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಕಾಂಗ್ರೆಸ್ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ.
ಸಭೆಯಲ್ಲಿ ಅತ್ಯಂತ ಪ್ರಮುಖವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಲು ಮುಂದಾದರೆ ಅದನ್ನು ತೀವ್ರವಾಗಿ ಖಂಡಿಸುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳುವ ಸಂಬಂಧ ಚರ್ಚೆ ನಡೆದಿದೆ. ಕಾಂಗ್ರೆಸ್ ಪಕ್ಷದ ನಿಲುವನ್ನು ಶಾಸಕರಿಗೆ ಸ್ಪಷ್ಟಪಡಿಸುವುದು ಪ್ರಮುಖ ಧ್ಯೇಯವಾಗಿದೆ. ಈಗಾಗಲೇ ವಿಧಾನಸಭೆಯಲ್ಲಿ ಎರಡು ದಿನಕ್ಕೂ ಹೆಚ್ಚು ಕಾಲ ಕಲಾಪವನ್ನು ಬೈರತಿ ಬಸವರಾಜ್ ರಾಜೀನಾಮೆಗೆ ಆಗ್ರಹಿಸಿ ವ್ಯರ್ಥ ಮಾಡಿರುವ ಕಾಂಗ್ರೆಸ್ ಪಕ್ಷ ಮುಂದಿನ ನಡೆಯನ್ನು ಅತ್ಯಂತ ಸೂಕ್ಷ್ಮವಾಗಿ ಇಡಲು ತೀರ್ಮಾನಿಸಿದೆ.
ಇದರಿಂದಾಗಿ ಸರ್ಕಾರ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಮಂಡನೆಯಾದರೆ ಅದನ್ನು ಯಾವ ರೀತಿ ವ್ಯವಸ್ಥಿತವಾಗಿ ವಿರೋಧಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಜನರ ದೃಷ್ಟಿಯಲ್ಲಿ ತಾವು ಚಿಕ್ಕವರಾಗದಂತೆ ನೋಡಿಕೊಳ್ಳುವ ಜೊತೆಗೆ ಕಾಯ್ದೆಯನ್ನು ಜಾರಿಗೆ ಬರದಂತೆ ತಡೆಯುವುದು ದೊಡ್ಡ ಸವಾಲಾಗಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬೆಂಗಳೂರಿನ ವಿಚಾರವಾಗಿ ಚರ್ಚೆ ಕೈಗೆತ್ತಿಕೊಂಡು ಎರಡು ದಿನಗಳ ಕಲಾಪವನ್ನು ಬಹುತೇಕ ವ್ಯರ್ಥಗೊಳಿಸುವ ಕಾಂಗ್ರೆಸ್ ಉತ್ತರ ಕರ್ನಾಟಕ ಹೈದರಾಬಾದ್ ಕರ್ನಾಟಕ ಭಾಗದ ಜನರ ಬೇಸರಕ್ಕೆ ಕಾರಣವಾಗಿದೆ. ಒಬ್ಬ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಕೈಗೊಂಡ ಹೋರಾಟ ಕಾಂಗ್ರೆಸ್ಗೇ ಮುಳ್ಳಾಗಿರುವ ಹಿನ್ನೆಲೆ ಪ್ರತಿಭಟನೆಯನ್ನು ನಿನ್ನೆಯೇ ಕೈಬಿಡಲಾಗಿದೆ. ಇದೀಗ ಮತಾಂತರ ನಿಷೇಧ ಕಾಯ್ದೆಯನ್ನು ಯಾವ ರೀತಿ ಹೋರಾಟವಾಗಿ ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ.
ಮುಂದಿನ ನಾಲ್ಕು ದಿನಗಳ ಕಲಾಪದಲ್ಲಿ ಯಾವ ರೀತಿ ಪಾಲ್ಗೊಳ್ಳಬೇಕು ಹಾಗೂ ಯಾವ್ಯಾವ ಚರ್ಚೆಯನ್ನು ಯಾವ ಸದಸ್ಯರು ಮಾಡಬೇಕು ಎಂಬ ಕುರಿತು ಮಾತುಕತೆ ನಡೆಯುತ್ತಿದೆ. ಅತಿವೃಷ್ಟಿ ಸಂಬಂಧ ವಿಧಾನಪರಿಷತ್ನಲ್ಲಿ ಚರ್ಚೆ ನಡೆಯಬೇಕೆಂದು ಇದೀಗ ಸಭಾಪತಿ ಬಸವರಾಜ್ ಹೊರಟ್ಟಿ ಅತಿವೃಷ್ಟಿ ಹಾಗೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಯನ್ನು ಒಂದಾಗಿಸಿ ಸದಸ್ಯರಿಗೆ ಚರ್ಚೆಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಯನ್ನು ಸಮರ್ಥವಾಗಿ ಮಂಡಿಸುವ ಮೂಲಕ ಈಗಾಗಲೇ ಕಳೆದ ಎರಡು ದಿನಗಳಲ್ಲಿ ಆಗಿರುವ ನಷ್ಟವನ್ನು ಸರಿಪಡಿಸಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ. ಇದೇ ವಿಚಾರವಾಗಿಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ಇದನ್ನೂ ಓದಿ:ಪ್ರತಿಕೃತಿಗಳಿಗೆ ಅವಮಾನ ಮಾಡಿದವರ ವಿರುದ್ಧ ದೇಶದ್ರೋಹ ಕೇಸ್ ಹಾಕಲು ಚಿಂತನೆ: ಸಚಿವ ಜ್ಞಾನೇಂದ್ರ