ಬೆಳಗಾವಿ :ರಾಜ್ಯದಲ್ಲಿರುವ 30 ಪರ್ಸೆಂಟ್ ಸರ್ಕಾರದಿಂದಾಗಿ ಭ್ರಷ್ಟಾಚಾರದ ತಾಂಡವವಾಡುತ್ತಿದೆ. ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಸರ್ಕಾರ ಸಾಲ ಮಾಡುವಂತಾಗಿದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಉದ್ಯೋಗ ಸೃಷ್ಟಿ ಆಗಿಲ್ಲ, ರೈತರ ಆದಾಯ ದ್ವಿಗುಣ ಆಗಿಲ್ಲ. ಅಚ್ಚೇ ದಿನ್ ಕೇವಲ ಅದಾನಿ, ಅಂಬಾನಿಗೆ ಮಾತ್ರ ಬಂದಿದೆ. ನಿಮ್ಮ ಒಳ್ಳೆಯ ದಿನ ತಗೊಂಡು, ಮುಂಚೆ ಇದ್ದ ಕೆಟ್ಟ ದಿನ ವಾಪಸ್ ಕೊಡಿ ಎಂದು ಜನ ಕೇಳುತ್ತಿದ್ದಾರೆ ಎಂದರು.
ಅಂಬಾನಿ, ಅದಾನಿಯ ಈಸ್ಟ್ ಇಂಡಿಯಾ ಕಂಪನಿ :ದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಈಸ್ಟ್ ಇಂಡಿಯಾ ಕಂಪನಿ ಇತ್ತು. ಈಗ ಅದಾನಿ, ಅಂಬಾನಿಯ ಈಸ್ಟ್ ಇಂಡಿಯಾ ಕಂಪನಿ ಇದೆ ಎಂದು ಟೀಕಿಸಿದರು.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕರು 30 ಪರ್ಸೆಂಟ್ ಸರ್ಕಾರ :ರಾಜ್ಯದಲ್ಲಿ ಸಿಎಂ ಏನ್ ಮಾಡ್ತಾರೆ ಮಂತ್ರಿಗಳಿಗೆ ಗೊತ್ತಿಲ್ಲ, ಮಂತ್ರಿಗಳು ಏನ್ ಮಾಡ್ತಾರೆ ಸಿಎಂಗೆ ಗೊತ್ತಿಲ್ಲ. ಲೂಟಿ ಮಾಡುತ್ತಿರುವ 30 ಪರ್ಸೆಂಟ್ ಸರ್ಕಾರ ರಾಜ್ಯದಲ್ಲಿದೆ. ಇದರಿಂದ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ. ಪರಿಣಾಮ, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಸಾಲದ ಸುಳಿಗೆ ರಾಜ್ಯ ಸಿಲುಕಿದೆ. ಇವರೆಲ್ಲ ಲೂಟಿ ಮಾಡಿ ಜಾತ್ರೆ ಮಾಡಿಕೊಂಡು ಹೋಗುವವರು ಎಂದು ಸರ್ಕಾರದ ವಾಗ್ದಾಳಿ ನಡೆಸಿದರು.
ಓದಿ : ಮೋದಿ ದೇಶ ಒಗ್ಗೂಡಿಸುವ ಬದಲು ವಿಭಜನೆ ಮಾಡುತ್ತಿದ್ದಾರೆ : ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ
ರಾಜ್ಯದಲ್ಲಿ ಕಾಂಗ್ರೆಸ್ ಝೀರೋ ಆಗುತ್ತೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಮ್ಮನ್ನ ಝೀರೋ ಮಾಡೋರು ಹೀರೊ ಮಾಡೋರು ಜನರು. ತಾಕತ್ ಇದ್ರೆ, ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಬರಲಿ. ಝೀರೋ-ಹೀರೊ ಯಾರು ಅಂತ ಗೊತ್ತಾಗಲಿದೆ ಎಂದು ಸವಾಲ್ ಹಾಕಿದರು.
ಲಖನ್ ಜಾರಕಿಹೊಳಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆಂಬ ವಿಚಾರದ ಬಗ್ಗೆ ಮಾತನಾಡಿ, ಲಖನ್ ಜಾರಕಿಹೊಳಿ ಬಿಜೆಪಿಗೆ ಹೋದ್ರೆ ಏನೂ ಪರಿಣಾಮ ಬೀರಲ್ಲ. ಗೋಕಾಕ್ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಬಹಳ ಸಮರ್ಥರಿದ್ದಾರೆ. ಸತೀಶ್ ಜಾರಕಿಹೊಳಿಗೆ ಗೋಕಾಕ್‌ನಲ್ಲಿ ಲಖನ್‌ಗಿಂತ ಹೆಚ್ಚು ಬೆಂಬಲ ಇದೆ. ಗೋಕಾಕ್‌ನಲ್ಲಿ ನಾವು ಸಹಿತ ಕೈ ಹಾಕಲ್ಲ, ನಾವು ಹಾಕಿರುವ ಟಿಪಿ ಕೂಡ ಕ್ಯಾನ್ಸಲ್ ಮಾಡಿದ್ದೇವೆ ಎಂದರು.
ಪ್ರಜಾಪ್ರಭುತ್ವಕ್ಕೆ ಅಗೌರವ ತರುವ ಸಂಗತಿ :ಮಾಜಿ ಸಚಿವ ಆರ್ ವಿ ದೇಶಪಾಂಡೆ ಮಾತನಾಡಿ, ಹಿರಿಯ ಮಂತ್ರಿಗಳೊಬ್ಬರು ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿರುವುದು ದೇಶದ ಇತಿಹಾಸದಲ್ಲಿ ಎಲ್ಲಿಯೂ ಆಗಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅಗೌರವ ತರುವ ಸಂಗತಿ ಎಂದರು.
ಹಿರಿಯ ಮಂತ್ರಿಗಳು ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡ್ತಾರೆ. ಸಿಎಂ ಮೇಲೆ ಮಂತ್ರಿಗಳು ಅವಿಶ್ವಾಸ ತೋರಿಸುತ್ತಿದ್ದಾರೆ. ಸಿಎಂ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಇಲ್ಲವೇ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ರೀತಿಯ ಘಟನೆ ದೇಶದ ಇತಿಹಾಸದಲ್ಲಿ ಎಲ್ಲಿಯೂ ಆಗಿಲ್ಲ. ಬಿಜೆಪಿಯಲ್ಲಿ ಯಾವುದೇ ಶಿಸ್ತು ಉಳಿದಿಲ್ಲ. ರಾಜ್ಯದಲ್ಲಿ ಆಡಳಿತ ಕೆಳ ಮಟ್ಟಕ್ಕೆ ಇಳಿದಿದೆ ಎಂದು ಹೇಳಿದರು.