ಬೆಳಗಾವಿ: ಸಚಿವ ಭೈರತಿ ಬಸವರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಜಾ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸದನಗಳಲ್ಲಿ ನಾವು ಧರಣಿ ನಡೆಸುತ್ತಲೇ ಇದ್ದೇವೆ. ನಮಗೆ ಚರ್ಚೆ ನಡೆಸಲು ಅವರು ಅವಕಾಶ ಕೊಡಲಿಲ್ಲ. ಭೈರತಿ ಬಸವರಾಜ ಅವರ ವಿರುದ್ಧ ನ್ಯಾಯಾಲಯದ ಆದೇಶಗಳು ಇವೆ. ಅವರು ಮೋಸ ಮಾಡಿ, ಫೋರ್ಜರಿ ಮಾಡಿ, ನಕಲಿ ಪಾರ್ಟಿಷನ್ ಡೀಲ್, ನಕಲಿ ಕ್ರಯ ಪತ್ರ ಸೃಷ್ಟಿಸಿದ್ದಾರೆ. ಸೆಕ್ಷನ್ 120 (B), 420 ಚೀಟಿಂಗ್ ಫೋರ್ಜರಿ ಎಫ್ಐಆರ್ ರಿಜಿಸ್ಟರ್ ಆಗಿ ಸಮನ್ಸ್ ಕೂಡ ಜಾರಿ ಆಗಿದೆ. ಅವರು ಸಚಿವರಾಗಿ ಹೇಗೆ ಮುಂದುವರಿಯುತ್ತಾರೆ?. ಕೂಡಲೇ ರಾಜೀನಾಮೆ ನೀಡಬೇಕು, ಸಚಿವರಾಗಿ ಮುಂದುವರಿಯಲು ಅವರಿಗೆ ನೈತಿಕತೆ ಇಲ್ಲ. ಕ್ರಿಮಿನಲ್ ಕೇಸ್ ಎದುರಿಸುತ್ತಿರುವವರಿಗೆ, ಅಪರಾಧಿ ಸ್ಥಾನದಲ್ಲಿ ಇರುವವರಿಗೆ ಪೊಲೀಸರು ಹೇಗೆ ಸೆಲ್ಯೂಟ್ ಹೊಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.