ಬೆಳಗಾವಿ:ಬಹುಶಃ ನಮ್ಮ ರಾಜ್ಯದಲ್ಲಿ ಯಾರಿಗೂ ಸಿಗದಿರುವಂತಹ ಅವಕಾಶಗಳು, ಸ್ಥಾನಮಾನಗಳು ನನಗೆ ದೊರೆತಿವೆ. ಅದಕ್ಕಾಗಿ ನಾನು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಏನೂ ಕೊರತೆಯಾಗಿಲ್ಲ. ಸಂತೃಪ್ತಿಯಿಂದ, ಸಮಾಧಾನದಿಂದ ಇದ್ದೇನೆ. ಕೇಂದ್ರ ಸರ್ಕಾರ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆಂದು ಎರಡು ತಿಂಗಳ ಹಿಂದೆಯೇ ಹೇಳಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪ ನಾಯಕತ್ವ ಇಲ್ಲದಿದ್ದರೆ ಬಿಜೆಪಿ ಪತನವಾಗುತ್ತೆ ಎಂಬ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ವೈ, ಏನೂ ಆಗಲ್ಲ, ನಮ್ಮ ಪಾರ್ಟಿಯಲ್ಲಿ ಅನೇಕ ಹಿರಿಯರ ನಾಯಕರುಗಳಿದ್ದಾರೆ. ನಮ್ಮ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ಧರಾಗಿ ನಾವೆಲ್ಲ ಒಟ್ಟಾಗಿ ಕೆಲ ಮಾಡುತ್ತೇವೆ. ನಮ್ಮ ಗುರಿಯೊಂದೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು. ಅದಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ:
ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಅವರ ಹೇಳಿಕೆಗೆ ಉತ್ತರ ಕೊಡಲ್ಲ. ನಾವು ಒಗ್ಗಟ್ಟಾಗಿದ್ದೇವೆ. ಇನ್ನೂ ನೂರು ಜನ ಸಿದ್ದರಾಮಯ್ಯ ಬಂದರೂ ಸಹ ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ತಿಳಿಸಿದರು.
ನೂರಕ್ಕೆ ನೂರರಷ್ಟು ಸಿ.ಟಿ.ರವಿ ಹೇಳಿರುವುದು ಸರಿಯಿದೆ. ನಾವ್ಯಾರೂ ಹೈಕಮಾಂಡ್ ಹಾಕಿರುವ ಗೆರೆ ದಾಟುವುದಿಲ್ಲ. ಆ ರೀತಿಯೇ ಹಿಂದಿನಿಂದ ನಡೆದುಕೊಂಡು ಬಂದಿದ್ದೇವೆ, ಮುಂದೆಯೂ ನಡೆದುಕೊಳ್ಳುತ್ತೇವೆ ಎಂದರು.
ಕುತೂಹಲ ಹೆಚ್ಚಿಸಿದ ಸಿ.ಟಿ.ರವಿ ಹೇಳಿಕೆ:
ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ತೀವ್ರ ಕುತೂಹಲ ಮೂಡಿಸಿರುವ ಮಧ್ಯೆ ಗೋವಾದಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೀಡಿರುವ ಹೇಳಿಕೆ ನಾಯಕತ್ವ ಬದಲಾವಣೆ ಬಗ್ಗೆ ಉಂಟಾಗಿರುವ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ. "ಬಿಎಸ್ ಯಡಿಯೂರಪ್ಪಗೆ ಬಿಜೆಪಿ ಎಲ್ಲಾ ಅವಕಾಶಗಳನ್ನೂ ನೀಡಿದೆ. 4 ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ. ಉಪಮುಖ್ಯಮಂತ್ರಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ನಲ್ಲೂ ಯಾರಿಗೂ ಇಷ್ಟು ಅವಕಾಶ ಸಿಕ್ಕಿಲ್ಲ. ಸಿಎಂ ಯಡಿಯೂರಪ್ಪ ಜನಪ್ರಿಯ ನಾಯಕರು. ಹೈಕಮಾಂಡ್ ಸೂಚನೆಯನ್ನು ಎಲ್ಲರೂ ಪಾಲಿಸಲೇಬೇಕು. ಬಿಜೆಪಿಯಲ್ಲಿ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರು" ಎಂದು ಸಿಟಿ ರವಿ ಹೇಳಿದ್ದಾರೆ.