ಬೆಳಗಾವಿ:ಜನಪರ ನಾಯಕರಿದ್ದರೆ ಅವರು ಪ್ರತಿನಿಧಿಸುವ ಕ್ಷೇತ್ರ ಯಾವ ರೀತಿ ಅಭಿವೃದ್ಧಿಯಾಗಬಹುದು ಎಂಬುದಕ್ಕೆ ಹುಕ್ಕೇರಿ ಕ್ಷೇತ್ರ ಮಾದರಿಯಾಗಿದೆ ಎಂದು ಸಚಿವ ಉಮೇಶ ಕತ್ತಿ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಡಿ ಹೊಗಳಿದರು.
ಹುಕ್ಕೇರಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮಾತನಾಡಿದ ಸಿಎಂ, ಸಂಗಮ ಬ್ಯಾರೇಜಿಗೆ ಹೊಸ ಏತ ನೀರಾವರಿ ಯೋಜನೆ ನೀಡಲು ಸರ್ಕಾರ ಬದ್ಧವಾಗಿದೆ. ಈ ಭಾಗದ ಪ್ರಗತಿಪರ ರೈತರು ಕಬ್ಬು, ಮೆಕ್ಕೆಜೋಳ ಬೆಳೆಯುತ್ತಾರೆ. ರೈತರ ಮಕ್ಕಳಿಗೆ ವೈಜ್ಞಾನಿಕ ಶಿಕ್ಷಣ ನೀಡಲು ಹುಕ್ಕೇರಿಯಲ್ಲಿ ಕೃಷಿ ಡಿಪ್ಲೋಮಾ ಕಾಲೇಜು ಪ್ರಾರಂಭಿಸಲಾಗುತ್ತದೆ ಎಂದರು.
ಉಮೇಶ ಕತ್ತಿಗೆ ಶ್ಲಾಘನೆ
ಉಮೇಶ ಕತ್ತಿಯವರು ತಡವಾಗಿ ಮಂತ್ರಿಯಾದರೂ ಸಹ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿಯವರು ನಡೆಸುವ ಪ್ರಗತಿ ವರದಿಯಲ್ಲಿ ಉಮೇಶ ಕತ್ತಿ ಉತ್ತಮ ಸ್ಥಾನ ಪಡೆಯಲಿದ್ದಾರೆ. ಹುಕ್ಕೇರಿ ಭಾಗದಲ್ಲಿ ಅನೇಕ ಹಿರಿಯರು ಸಹಕಾರ ರಂಗದಲ್ಲಿ ಸಾಧನೆಗೈದ ಅನೇಕ ಹಿರಿಯರಿದ್ದಾರೆ. ಹುಕ್ಕೇರಿ ಇಲೆಕ್ಟ್ರಿಕಲ್ ಸಹಕಾರ ಸೊಸೈಟಿ ಸುಮಾರು 100 ಕೋಟಿ ರೂ. ಲಾಭದಲ್ಲಿರುವುದು ನಾಯಕರ ಶಿಸ್ತಿಗೆ ಸಾಕ್ಷಿಯಾಗಿದೆ ಸಿಎಂ ಅಭಿಪ್ರಾಯಪಟ್ಟರು.
'ಹೂವು ತರುವ ಕೆಲಸ ಮಾಡುತ್ತೇನೆ'
ಕೃಷಿ ಅಭಿವೃದ್ಧಿಯ ಜೊತೆಗೆ ಕೃಷಿಕನ ಕಲ್ಯಾಣಕ್ಕಾಗಿ ಹೆಚ್ಚು ಹಣಕಾಸನ್ನು ಕೃಷಿರಂಗದಲ್ಲಿ ತೊಡಗಿಸಲು ಉದ್ದೇಶಿಸಲಾಗಿದೆ. 20 ಲಕ್ಷ ರೈತರ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ವಿಶೇಷ ವಿದ್ಯಾರ್ಥಿ ಯೋಜನೆ ರೂಪಿಸಿ 10 ಸಾವಿರ ಕೋಟಿ ರೂ.ಮೀಸಲಿಡುವ ಮೂಲಕ ಇಡೀ ಭಾರತದಲ್ಲಿಯೇ ಕರ್ನಾಟಕ ಮಾದರಿಯಾಗಿದೆ. ಎಲ್ಲಾ ಜಾತಿ,ಜನಾಂಗಗಳ ಏಳ್ಗೆಯಾದರೆ ರಾಜ್ಯದ ಉತ್ಪಾದಕತೆ, ತಲಾ ಆದಾಯ ಹೆಚ್ಚಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ, ರಾಜ್ಯದ ಜನತೆಯ ವಿಶ್ವಾಸಕ್ಕೆ ಅನುಗುಣವಾಗಿ ನಾಡಿನ ಜನರ ಮನೆಗೆ ಹೂವು ತರುವ ಕೆಲಸ ಮಾಡುತ್ತೇನೆ, ಹುಲ್ಲನ್ನು ಅಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.
'ಸಿಎಂಗೆ ಕಾಳಜಿಯಿದೆ'
ಸಾರಿಗೆ ಹಾಗೂ ಎಸ್.ಟಿ.ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತರ ಕರ್ನಾಟಕವೂ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿರುವ ನಾಯಕರಾಗಿದ್ದಾರೆ. ಬಡವರು, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಬಗ್ಗೆ ಕಾಳಜಿ ಹೊಂದಿದ್ದಾರೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಕೂಡಲೇ ಎಸ್ಟಿ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಅಸ್ತಿತ್ವಕ್ಕೆ ತಂದಿದ್ದಾರೆ.
ಕೋವಿಡ್‌ನ ಸಂಕಷ್ಟದ ಕಾಲದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನದಿಂದಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ನಾಡಿನ ಬಹುತೇಕ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ, ಕೋವಿಡ್ ಸವಾಲುಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಸಾರಿಗೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲು ಸಂಕಲ್ಪ ಮಾಡಲಾಗಿದೆ. ನಾಲ್ಕೂ ನಿಗಮಗಳಲ್ಲಿ ಸುಧಾರಣೆ ಮಾಡಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಮಾತನಾಡಿ, ಮುಂದಿನ ಚುನಾವಣೆಯ ಬಳಿಕ ಮಲ್ಲಿಕಾರ್ಜುನ ಏತ ನೀರಾವರಿ ಅನುಷ್ಠಾನದ ಮೂಲಕ ಕ್ಷೇತ್ರವನ್ನು ಸಮೃದ್ಧಿ ಮಾಡುವ ಸಂಕಲ್ಪಕ್ಕೆ ಮುಖ್ಯಮಂತ್ರಿಯವರ ಸಹಕಾರ ಬೇಕು ಎಂದರು.
ಇದನ್ನೂ ಓದಿ:ಭಾರತ್ ಬಂದ್ಗೆ ಯಾರೂ ಬೆಂಬಲ ಕೊಡಬೇಡಿ : ಮಾಜಿ ಮುಖ್ಯಮಂತ್ರಿ ಬಿಎಸ್ವೈ