ಬೆಳಗಾವಿ:ನನ್ನ ದಮ್ ಬಗ್ಗೆ ಮಾತನಾಡುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಎಷ್ಟು ದಮ್ ಇದೆ ಎಂಬುದು ಗೊತ್ತು ಬಿಡ್ರಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗರಂ ಆದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅವರದೆಲ್ಲ ಗೊತ್ತಿದೆ, ಅವರ ದಮ್ ಎಷ್ಟಿದೆ ಅಂತ ಗೊತ್ತಿದೆ. ಮುಖ್ಯಮಂತ್ರಿಯಾಗಿ ಅವರೇ ಸ್ಥಾನ ಉಳಿಸಿಕೊಳ್ಳಲಿಲ್ಲ. ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ ಎಂದು ತಿರುಗೇಟು ನೀಡಿದರು.
ಪರಿಷತ್ ಚುನಾವಣೆ ಫಲಿತಾಂಶ ಖುಷಿ ತಂದಿದೆ. ಕಳೆದ ಸಲ 6 ಸ್ಥಾನ ಗೆದ್ದಿದ್ವಿ, ಈ ಚುನಾವಣೆಯಲ್ಲಿ 11 ಗೆದ್ದಿದ್ದೇವೆ. ರಾಜ್ಯದಲ್ಲಿ 13 ಅಥವಾ 14 ಗೆಲ್ಲಬಹುದು ಎಂದು ಕೊಂಡಿದ್ವಿ. ಎರಡು ಕಡೆ ಅಲ್ಪ ಮತಗಳ ಹಿನ್ನಡೆ ಆಗಿದೆ. ಒಳ್ಳೆಯ ಫಲಿತಾಂಶ ಬಂದಿದೆ. ಕಳೆದ ಚುನಾವಣೆಯಲ್ಲಿ ಆರು ಇತ್ತು, ಈಗ ಐದು ಹೆಚ್ಚಾಗಿದೆ. ಪಕ್ಷದ ಶಕ್ತಿ ವೃದ್ಧಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ. ಮೈಸೂರಲ್ಲಿ ಮರು ಮತ ಎಣಿಕೆಗೆ ಮನವಿ ಮಾಡಿದ್ದೇವೆ ಎಂದರು.